ಯುದ್ದಭೀತಿಯಿಂದ ಪಾರಾಗಿ ಬಂದ ವಿದ್ಯಾರ್ಥಿಗಳಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಕೆ : ಭಾರತ ದೇಶದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಪೋಷಕರ ಕೋರಿಕೆ
ದಾವಣಗೆರೆ : ರಷ್ಯಾ ಮತ್ತು ಉಕ್ರೇನ್ ಯುದ್ದಭೀತ ಪ್ರದೇಶದಿಂದ ಆತಂಕಕ್ಕೆ ಒಳಗಾಗಿ ದೇಶಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನಮ್ಮ ದೇಶದಲ್ಲೇ ಮುಂದುವರೆದಂತೆ ಅನುಕೂಲ ಮಾಡಿಕೊಡುವಂತೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಅವರಿಗೆ ಮನವಿ ಸಲ್ಲಿಸಿದರು. ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ರಷ್ಯಾ ಮತ್ತು ಉಕ್ರೇನ್ ದೇಶದಲ್ಲಿ ಯುದ್ದ ಆರಂಭವಾದಂದಿನಿಂದ ದಾವಣಗೆರೆ ಜಿಲ್ಲೆಯ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮುಂತ್ರಿ ಮಹೋದಯರು, ಸಚಿವರು, ಶಾಸಕರಾದಿಯಾಗಿ ಇಂಡಿಯನ್ ಎಂಬೆಸ್ಸಿ, ಜಿಲ್ಲಾಡಳಿತ ಹೀಗೆ ಸರ್ಕಾರದ ಅಧೀನದಲ್ಲಿರುವ ಪ್ರತಿಯೊಬ್ಬರು ವಿದ್ಯಾರ್ಥಿಗಳ ಬರುವಿಕೆಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಅದರ ಪ್ರತಿಫಲವೇ ಇಂದು ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ಇರುವುದು. ಆದರೆ ಭಾರತ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿರುದ್ದದ ಕೆಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿ ಅವು ಬೇರೆ ಸ್ವರೂಪವನ್ನೇ ಪಡೆದುಕೊಂಡಿತ್ತು. ಹಾಗಾಗಿ ಇಂದು ವಿದೇಶದಲ್ಲಿ ಯುದ್ದದ ಭೀತಿಯಲ್ಲಿಂದ ಪಾರಾಗಿ ಬಂದ ಮಕ್ಕಳು ಮತ್ತು ಅವರ ಪೋಷಕರನ್ನು ಕೂರಿಸಿ ಅವರ ಮೂಲಕವೇ ಅನುಭವ ಹಂಚಿಕೊಳ್ಳುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಕ್ರೇಶ್‌ನಿಂದ ಪಾರಾಗಿ ಬಂದ 11 ಜನ ಮಕ್ಕಳು ತಮ್ಮನ್ನು ಕರೆತರಲು ಭಾರತ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಪಟ್ಟ ಶ್ರಮ, ಸಹಾಯದ ಕುರಿತು ಪ್ರತಿಯೊಬ್ಬರು ಹಂಚಿಕೊಂಡರು . ಇವರ ಜೊತೆಗೆ ಪೋಷಕರು ಸಹ ಇಡೀ ಭಾರತ ಸರ್ಕಾರ, ರಾಜ್ಯ ಸರ್ಕಾರ, ಶಾಸಕರು, ಸಂಸದರು, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸೈಯ್ಯದ್ ಅಬಿಬಾ, ಮಿಜ್‌ಬಾನು, ರೋಹಿತ್, ಗಗನ್‌ದೀಪ್ ಜೈನ್, ವಿನಯ್, ಆದರ್ಶ, ವಿರೇಶ್ ಪ್ರವೀಣ್, ಕುಶಾಲ್, ಪ್ರಿಯಾ, ಮನೋಜ್ ವಿದ್ಯಾರ್ಥಿಗಳ ಜೊತೆಗೆ ಇವರ ಪೋಷಕರು ಸಭೆಯಲ್ಲಿ ಪಾಲ್ಗೋಂಡು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ವಿದೇಶದಿಂದ ಬಂದ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಪುಸ್ತಕಗಳನ್ನು ನೀಡಿದರು.
ರಷ್ಯಾ ಮತ್ತು ಉಕ್ರೇನ್ ಯುದ್ದಭೀತ ಪ್ರದೇಶದಿಂದ ಆತಂಕಕ್ಕೆ ಒಳಗಾಗಿ ದೇಶಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನಮ್ಮ ದೇಶದಲ್ಲೇ ಮುಂದುವರೆದಂತೆ ಅನುಕೂಲ ಮಾಡಿಕೊಡುವಂತೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಅವರಿಗೆ ಮನವಿ ಸಲ್ಲಿಸಿದರು.