‘ಗೌರವ ರಕ್ಷೆ’ ಸರ್ಕಾರಿ ಕಚೇರಿಯಲ್ಲಿ ಮಾತ್ರ ನೀಡುವಂತೆ ಡಿಜಿಪಿ ಅಧಿಕೃತ ಆದೇಶ

ಬೆಂಗಳೂರು: ಪೊಲೀಸ್ ಇಲಾಖೆ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಗಣ್ಯಮಾನ್ಯರಿಗೆ ಸಲ್ಲಿಸುತ್ತಿದ್ದ ಗೌರವ ರಕ್ಷೆಯನ್ನು ಇನ್ನು ಮುಂದೆ ಸರ್ಕಾರದ ಕಚೇರಿಗಳ ಆವರಣ ಹೊರತು ಪಡಿಸಿ ಮತ್ತೆಲ್ಲಿಯೂ ನೀಡುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಗೌರವ ರಕ್ಷೆ ಪೊಲೀಸ್ ಕೈಪಿಡಿಯ ಹಳೆಯ ಪದ್ದತಿಯಾಗಿದ್ದು, ಅದನ್ನು ಕಾಲಕಾಲಕ್ಕೆ ಬದಲಾಯಿಸಿದರೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ವಿಮಾನನಿಲ್ದಾಣ, ರೈಲ್ವೇನಿಲ್ದಾಣ, ಹೋಟೆಲ್‌ಗಳು, ಪ್ರವಾಸಿ ಮಂದಿರ ಸೇರಿದಂತೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಗೌರವ ರಕ್ಷೆಯನ್ನು ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದ್ದು, ಒಂದೇ ದಿನ ಹಲವಾರು ಸ್ಥಳಗಳಲ್ಲಿ ಸಲ್ಲಿಸುತ್ತಿರುವುದೂ ಇಂತಹ ಪದ್ಧತಿಗಳು ಗೌರವ ರಕ್ಷೆಯ ಪಾವಿತ್ರ್ಯತೆಗೆ ಕುಂದು ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಗೌರವ ರಕ್ಷೆಯನ್ನು ಗಣ್ಯರು ಆಗಮಿಸಿದಾಗ ಆ ದಿನದಲ್ಲಿ ಒಂದು ಬಾರಿ ಮಾತ್ರ ಸಲ್ಲಿಸಬೇಕು, ಗಣ್ಯರು ನಿರ್ಗಮಿಸುವಾಗ ಗೌರವ ರಕ್ಷೆಯನ್ನು ಸಲ್ಲಿಸುವ ಪದ್ಧತಿಯನ್ನು ಕೈಬಿಡಬೇಕು ಎಂದು ಸೂಚನೆ ನೀಡಿರುವ ಅವರು, ಈ ಸೂಚನೆಗಳು ರಾಜ್ಯಪಾಲರು ಮತ್ತು ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಭೇಟಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.