ಹರಿಹರ ಸ್ಥಳೀಯ ಸಂಸ್ಥೆ ಉಪಚುನಾವಣೆ: ರಜೆ ಘೋಷಣೆ
ದಾವಣಗೆರೆ: ಹರಿಹರ ನಗರಸಭೆ ವಾರ್ಡ್ ಸಂ. 14 ರ ಕಾಳಿದಾಸ ನಗರ ಮತ ಕ್ಷೇತ್ರಕ್ಕೆ ಸೆ. 03 ರಂದು ಉಪಚುನಾವಣೆ ನಡೆಯುವುದರಿಂದ ಆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ) ಅಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.
ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಚುನಾವಣೆ ನಡೆಯುವ ವಾರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಇನ್ನಿತರೇ ಸಂಸ್ಥೆಗಳಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರುಗಳಿಗೆ ಮತದಾನ ದಿನಾಂಕದಂದು ವೇತನ ಸಹಿತ ರಜೆ ನೀಡುವಂತೆ ಆದೇಶಿಸಿದೆ.
ಚುನಾವಣೆ ನಡೆಯುವ ವಾರ್ಡ್ ವ್ಯಾಪ್ತಿಯ ಹೊರಗಡೆ ಕೆಲಸ ನಿರ್ವಹಿಸುತ್ತಿದ್ದು, ಆದರೆ ಚುನಾವಣೆ ನಡೆಯುತ್ತಿರುವ ವಾರ್ಡಿನ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರಾಗಿರುವವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಸೆ. 03 ರಂದು ಪ್ರಜಾಪ್ರತಿನಿದ್ಯ ಕಾಯ್ದೆ 1951ರ ಸೆಕ್ಷನ್ 135(ಬಿ)ರಡಿಯಲ್ಲಿ ವೇತನ ಸಹಿತ ರಜೆಯನ್ನು ನೀಡಲು ಆದೇಶಿಸಿದೆ.
ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ ಮತ್ತು ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.