// ಹೃದಯ ಸ್ಪರ್ಶಿ ಗುರು ವಂದನಾ ಕಾರ್ಯಕ್ರಮ//
ದಾವಣಗೆರೆ: ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ. ಜಿನುಗುವ ಮಳೆಯಲ್ಲಿ ಪ್ರಯಾಣ ಕಿರಿಕಿರಿಯೇ ಸರಿ. ಆದರೂ ಆ ವಿದ್ಯಾರ್ಥಿಗಳ ಪ್ರೀತ್ಯಾಭಿಮಾನ ಎಲ್ಲರನ್ನೂ ಅಲ್ಲಿಗೆ ಹೊತ್ತೊಯ್ದಿತ್ತು.
ದಾವಣಗೆರೆ ಪಿ. ಬಿ ರಸ್ತೆಯಲ್ಲಿರುವ ಡಿ. ಆರ್. ಆರ್ ವಿದ್ಯಾ ಸಂಸ್ಥೆಯ ಸಭಾಂಗಣವು ದಿನಾಂಕ : 23/07/2023 ರ ಬೆಳಿಗ್ಗೆ 11 ಗಂಟೆಗೆ 2008 – 09 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಅರ್ಥಪೂರ್ಣ ” ಗುರು ವಂದನಾ ” ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಎಲ್ಲಾ ಶಿಕ್ಷಕರಿಗೂ ಇಂತಹ ಸಂಸ್ಕಾರ ಭರಿತ ವಿದ್ಯಾರ್ಥಿಗಳೊಂದಿಗೆ ಕಳೆದ ದಿನಗಳ ನೆನಪು ಗರಿಗೆದರಿದವು.
ವಿದ್ಯಾರ್ಥಿಗಳು ತಮ್ಮ ಪ್ರೀತಿಯ ವಿದ್ಯಾ ಗುರುಗಳ ಪ್ರೀತ್ಯಾದಾರದಿಂದ ಆಹ್ವಾನಿಸಿ , ಕಲಿಸಿ ಕೊಟ್ಟ ವಿದ್ಯೆ ಸ್ಮರಿಸಿ, ಗುರು ವಂದನೆ ಸಲ್ಲಿಸಿದರು. ಗುರುಗಳ ಪಾಠ, ಆಟೋಟಗಳ ಮೆಲುಕು ಹಾಕಿ, ಪಾಠದ ಜೊತೆ ಗುರುಗಳು ಕಲಿಸಿದ ಜೀವನ ಪಾಠ, ಸಂಸ್ಕೃತಿ, ಸಂಸ್ಕಾರ , ಮೌಲ್ಯ, ಪ್ರತಿಭೆಗೆ ನೀಡಿದ ಮನ್ನಣೆ, ಪ್ರೇರಣೆ ಇತ್ಯಾದಿ ನೆನೆದು ಗದ್ಗದಿತರಾದರು. ತಮ್ಮ ನೆಚ್ಚಿನ ಗುರುಗಳನ್ನು ಸನ್ಮಾನಿಸಿ , ಗುರು ಕಾಣಿಕೆ ನೀಡಿ ಸಂಭ್ರಮಿಸಿದರು.
ಈ ವೇಳೆ ಗುರು ವೃಂದದ ಪರವಾಗಿ ಹಾಲೇಶ್ ಹಂಚಿನಮನೆ ನಲ್ಕುದುರೆ , ತಿಪ್ಪೇಸ್ವಾಮಿ, ಗಂಗಾಧರ ಬಿ ಎಲ್ ನಿಟ್ಟೂರ್, ಮಂಜುನಾಥ್, ನಾಗರಾಜಪ್ಪ, ಹೇಮಾವತಿ ಸಾವಳಿಗಿ, ಸುರೇಶ್ ಪಿ ಮುರುಗಿ ಮಾತಾಡಿ ವಿದ್ಯಾರ್ಥಿಗಳ ಗುರು ಸ್ಮರಣೆಯ ಈ ಸಂಸ್ಕೃತಿ ಮಾದರಿ ಎಂದು ಶ್ಲಾಘಿಸಿ, ಪ್ರತಿಯಾಗಿ ವಂದಿಸಿ, ಶುಭ ಹಾರೈಸಿದರು .
ಶಿಕ್ಷಕರಾದ ಭೋಜರಾಜ್ ಯಾದವ್ , ಟಿ ಮಹೇಶನ್ , ಶಿಕ್ಷಕಿಯರಾದ ಶ್ರೀಮತಿ ಸರಸ್ವತಿ, ಶ್ರೀಮತಿ ಮಹಾಲಕ್ಷ್ಮೀ, ಶ್ರೀಮತಿ ಸುಚಿತ್ರಾ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಅನಿತಾ, ಆಶಾ, ಸೌಮ್ಯ, ಗೀತ, ಶೃತಿ, ಶ್ರೀಧರ್, ಗಿರೀಶ್ ಭಟ್, ಮಣಿಕಂಠ, ಕಿರಣ್ ಸೇರಿದಂತೆ 2008 – 09 ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.