ಚನ್ನಗಿರಿಯಲ್ಲಿ ಭಾರೀ ಮಳೆ, ಹಳ್ಳದಂತಾದ ರಸ್ತೆಗಳು: ವೃದ್ದನಿಗೆ ಗಾಯ

ದಾವಣಗೆರೆ: ಹಲವೆಡೆ ಉತ್ತಮ ಮಳೆಯಾಗಿದ್ದು, ಚನ್ನಗಿರಿಯಲ್ಲಿ ಸಂಜೆ ಭರ್ಜರಿ ಮಳೆಯಾಗಿದೆ.
ಸುಮಾರು ಹೊತ್ತು ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ಹಳ್ಳದಂತಾಗಿದ್ದವು. ಸಂಚಾರ ಅಸ್ತವ್ಯಸ್ತವಾಗಿತ್ತು.
ಹಲವು ದಿನಗಳಿಂದ ಮುನಿಸಿಕೊಂಡಿದ್ದ ವರುಣ ದೇವ ಮಂಗಳವಾರ ಕೃಪೆ ತೋರಿದಂತಿತ್ತು. ಮಳೆ ಬಾರದೆ ಕೃಷಿ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದ ರೈತರು ಸಂಜೆ ಸುರಿದ ಮಳೆಗೆ ಹರ್ಷ ಚಿತ್ತರಾಗಿದ್ದಾರೆ. ಕೃಷಿ ಚಟುವಟಿಕೆಗಳು ಗರಿಗೆದರುವ ಎಲ್ಲಾ ಸಾಧ್ಯತೆಗಳೂ ಇವೆ.
ದಾವಣಗೆರೆಯ ಕೆ ಆರ್ ಮಾರುಕಟ್ಟೆಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿವೆ. ಮಳೆ ಬಂದರೆ ಗುಂಡಿ ಯಾವುದು ಎಂಬಮಾಹಿತಿ ಸಿಗುವುದಿಲ್ಲ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಾರ್ವಜನಿಕವಾಗಿ ಮಾತುಗಳು ಕೇಳಿಬಂದಿವೆ. ಮಳೆ ಬಂದಾಗ ನೀರಿನಿಂದ ತುಂಬುವ ಗುಂಡಿಗೆ ಇಂದು ವಯೋವೃದ್ದರು ಬಿದ್ದು ಅವರ ಕಾಲಿಗೆ ಗಾಯಗಳಾಗಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.