ಹೆಣ್ಣುಮಗಳ ತಂದೆಯಾಗಿ ಕಾಳಜಿಯಿಂದ ಹೇಳಿದ್ದನ್ನ ತಪ್ಪಾಗಿ ಅರ್ಥೈಸಲಾಗಿದೆ – ಗೃಹ ಸಚಿವ ಆರಗ ಜ್ಞಾನೇಂದ್ರ
ದಾವಣಗೆರೆ: ಹೆಣ್ಣಿನ ಮಾನ, ಪ್ರಾಣಕ್ಕೆ ನಮ್ಮ ದೇಶದಲ್ಲಿ ಬಹಳ ದೊಡ್ಡ ಆದ್ಯತೆ ನೀಡಲಾಗುತ್ತದೆ. ಯಾಕೆಂದರೆ ಅದು ನಮ್ಮ ದೇಶದ ಸಂಸ್ಕೃತಿ. ನಾನು ಕೂಡ ಒಬ್ಬ ಹೆಣ್ಣುಮಗಳ ತಂದೆಯಾಗಿ ನಿಮ್ಮನೆಯ ಹೆಣ್ಣುಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ, ಯಾವಾಗಂದರೆ ಆಗ ಹೊರಗೆ ಕಳುಹಿಸಬೇಡಿ ಎಂದು ಕಾಳಜಿಯುತವಾಗಿ ಹೇಳಿದ್ದೆ. ಇದನ್ನು ವಿರೋಧ ಪಕ್ಷದವರು ತಪ್ಪಾಗಿ ಅರ್ಥೈಸಿ ಕೊಂಡರೆ ಅದಕ್ಕೆ ತಾವೇನೂ ಮಾಡಲಾಗುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಪಕ್ಷದ ಆರೋಪ ತಳ್ಳಿಹಾಕಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರಿಗೆ ಮಾತನಾಡೋಕೆ ಬೇರೆ ವಿಷಯಗಳಿಲ್ಲ. ಆರೋಪ ಮಾಡುವುದೇ ಅವರ ಕೆಲಸ. ನಮ್ಮ ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಗಟ್ಟಿಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದ ಪೊಲೀಸರೇ ಈಗಲೂ ಇರೋದು ಎಂದರು.
ಮಾದಕ ವಸ್ತುಗಳಿಂದ ಯುವಜನರ ಶಕ್ತಿ ಹರಣವಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಇಂತಹ ಚಟಕ್ಕೆ ಬೀಳುತ್ತಿದ್ದಾರೆ. ಇತ್ತೀಚೆಗಷ್ಟೇ ಟನ್ ಗಟ್ಟಲೆ ಪೊಲೀಸರು ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ನಿರ್ದೇಶನ ನೀಡಿದ್ದು ಶೀಘ್ರದಲ್ಲೇ ಇದಕ್ಕೆ ತಿಲಾಂಜಲಿ ಇಡಲಿದ್ದೇವೆ ಎಂದರು.