ಗಾಂಧಿನಗರ ಸರ್ಕಾರಿ ಶಾಲೆಗೆ ಹೈಟೆಕ್ ಟಚ್.. ಬ್ಯಾಂಕ್ ಆಫ್ ಬರೋಡಾ’ದಿಂದ ಕಂಪ್ಯೂಟರ್ ಲ್ಯಾಬ್ ಸಪೋರ್ಟ್.
ಮಂಗಳೂರು: ವಿದ್ಯಾರ್ಥಿಗಳು ಬ್ಯಾಂಕಿನ ಸೌಲಭ್ಯವನ್ನು ಪಡೆದು ಸಮಾಜದಲ್ಲಿ ಉತ್ತಮ ನಾಗರಿಕ ರಾಗಿ,ನಾಯಕರಾಗಿ ಬೆಳೆಯಿರಿ ಎಂದು ಬ್ಯಾಂಕ್ ಆಫ್ ಬರೋಡ ಮಹಾ ಪ್ರಬಂಧಕಿ ಗಾಯತ್ರಿ ಆರ್ ಕರೆನೀಡಿದ್ದಾರೆ.
ಗಾಂಧಿನಗರದ ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೀಕೃತ ಕಂಪ್ಯೂಟರ್ ಲ್ಯಾಬ್ ನ ಕೊಠಡಿಯನ್ನು ಉದ್ಘಾಟಿಸಿದ ಅವರು, ಬ್ಯಾಂಕ್ ಆಫ್ ಬರೋಡಾ ಶಿಕ್ಷಣ, ಸಾಮಾಜಿಕ ಚಟುವಟಿಕೆಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಗಾಂಧಿನಗರ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಬ್ ನಿರ್ಮಾಣದ ಅಗತ್ಯವಿದೆ ಎನ್ನುವ ಬಗ್ಗೆ ನನ್ನ ಗಮನಕ್ಕೆ ಬಂದಾಗ ಬ್ಯಾಂಕ್ ನ ಸಿಎಸ್ಆರ್ ನಿಧಿಯಿಂದ ನೆರವು ನೀಡಲಾಗಿದೆ ಎಂದರು. ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಗೆ ಈ ಲ್ಯಾಬ್ ಪೂರಕವಾಗುತ್ತದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಈ ಲ್ಯಾಬ್ ಸದುಪಯೋಗ ವಾಗಲಿ ಎಂದು ಗಾಯತ್ರಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸಂಧ್ಯಾಆಚಾರ್ ವಹಿಸಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಬ್ಯಾಂಕ್ ಆಫ್ ಬರೋಡದ ಕ್ಷೇತ್ರಿಯ ಪ್ರಬಂಧಕರಾದ ಸಂಜಯ್ ವಾಲಿ , ಎಸ್.ಸಿ.ಡಿ.ಎಂ.ಸಿ ಅಧ್ಯಕ್ಷ ಮನೋಜ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಸುವರ್ಣ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಉಸ್ಮಾನ್, ಬ್ಯಾಂಕ್ ಆಫ್ ಬರೋಡದ ಪ್ರಬಂಧಕರಾದ ಪಿ.ಎಸ್.ಪಾಟ್ಕರ್, ಗಣೇಶ್ ಎಲ್.ಎಸ್, ಪ್ರದೀಪ್ ಶೆಟ್ಟಿ, ವಿಶ್ವನಾಥ ರೈ, ಪ್ರಜ್ವಲ್ ಹೆಗಡೆ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಮೊದಲಾವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋದ ಬಿ ಸ್ವಾಗತಿಸಿದರು ,ಶಿಕ್ಷಕಿ ಇಂದು ಮತಿ ವಂದಿಸಿದರು. ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.