ದಾವಣಗೆರೆ: ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಶೇ.೪೦ ವೇತನ ಹೆಚ್ಚಳ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ಮಾ.೧ರಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಶಿಕ್ಷಕರುಗಳು ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆ ಮೌಲ್ಯಮಾಪನ ಕಾರ್ಯಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಪ್ರೌಢಶಾಲ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕ ಕರೆ ನೀಡಿದೆ.
ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್‌ಗಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷ ಬಿ. ಮುಬಾರಕ ಆಲಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
