ಸುಪ್ರೀಂಕೋರ್ಟ್ ಮೆಟ್ಟಿಲಿಗೆ ಹಿಜಾಬ್ ವಿವಾದ
ಬೆಂಗಳೂರು: ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿದ್ದ ತೀರ್ಪಿನ ವಿರುದ್ದವಾಗಿ ಸುಪ್ರೀಂಕೋರ್ಟ್ ಮೆಟ್ಟಿಲಿಗೆ ಹಿಜಾಬ್ ವಿವಾದ ಕಾಲಿಟ್ಟಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ. ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿತು. ಈ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿದ್ದ ಹಿಜಾಬ್ ಚರ್ಚೆಗೆ ತೆರೆ ಬಿದ್ದಿದೆ.
ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹಿಜಾಬ್ ನಿರ್ಬಂಧ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ವಿದ್ಯಾರ್ಥಿನಿ ನಿಭಾನಾಜ್ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ.
ಸಮವಸ್ತ್ರ ಕಡ್ಡಾಯ ಆದೇಶ ಎತ್ತಿಹಿಡಿದ ಹೈಕೋರ್ಟ್ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ 219 ಪುಟಗಳ ತೀರ್ಪಿನ ಪ್ರತಿ ಲಭ್ಯವಾಗಿತ್ತು. ಪ್ರತಿ ಅಧ್ಯಯನ ಮಾಡಿದ ಬಳಿಕ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ವಿವಾದ ಮೊದಲು ಆರಂಭವಾಗಿದ್ದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ. ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಿಗೂ ಈ ವಿವಾದ ಹಬ್ಬಿತು. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದರು. 11 ದಿನಗಳ ಕಾಲ ನಿರಂತರವಾಗಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಫೆಬ್ರವರಿ 25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ತೀರ್ಪು ಪ್ರಕಟಿಸಿತು. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸೋದು ನಮ್ಮ ಧಾರ್ಮಿಕ ಹಕ್ಕು, ಕುರಾನ್ ಹೇಳಿದಂತೆ ನಾವು ನಡೆಯುತ್ತೇವೆ ಎಂದು ಹೇಳಿದ್ದರು. ಆಲಿಯಾ ಅಸಾದಿ ಮಾತನಾಡಿ, “ಹೈಕೋರ್ಟ್ನಲ್ಲಿ ನಮಗೆ ಹಕ್ಕು ಸಿಗುತ್ತದೆ ಅನ್ನೋ ನಂಬಿಕೆ ಇತ್ತು. ಆದರೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ. ನ್ಯಾಯ ಸಿಗೋವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ. ಕುರಾನ್‌ನಲ್ಲಿ ಹೇಳಿರುವುದರಿಂದ ನಾವು ಹಿಜಾಬ್‌ಗೆ ಶಿಕ್ಷಣ ತ್ಯಾಗ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದರು.