Hindi: ದಾವಣಗೆರೆ ಜಿಲ್ಲೆಯನ್ನು ವರ್ಲ್ಡ್ ಫೇಮಸ್ ಮಾಡುವೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ – ಸಂಸದರ ಹಿಂದಿ ಭಾಷಣಕ್ಕೆ ಸಚಿವರ ಮೆಚ್ಚುಗೆ

IMG-20250323-WA0025

ದಾವಣಗೆರೆ: (Hindi) ಸಮಾಜದ ದುಡ್ಡನ್ನ ದುರ್ಬಳಕೆ ಮಾಡಿಕೊಳ್ಳುವವರು ಎಂದಿಗೂ ಉದ್ದಾರವಾಗಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ತಿಳಿಸಿದರು.

ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿನ ಖಬರಸ್ಥಾನದಲ್ಲಿ‌ 25 ಲಕ್ಷ ಮೌಲ್ಯದ ವಜುಖಾನ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇಲ್ಲಿನ ಖಬರಸ್ತಾನದ ಮುಂದೆ ನಮಾಜ್ ಮಾಡಲು ಉತ್ತಮವಾದ ಸಿಸಿ ರಸ್ತೆ ನಿರ್ಮಿಸಲಾಗಿದೆ. ಖವರಸ್ಥಾನದ ಅಭಿವೃದ್ದಿಗಾಗಿ 2005 ಹಾಗೂ 2013 ರಲ್ಲಿ ಸಭೆ ಹಾಗೂ ಚರ್ಚೆ ನಡೆಸಲಾಗಿತ್ತು ಆದರೆ ನೆನೆಗುದಿಗೆ ಬಿದ್ದಿದ್ದ ಖಬರಸ್ಥಾನ ಅಭಿವೃದ್ದಿಗೆ 25 ವರ್ಷಗಳ ಬಳಿಕ ಕಾಂಗ್ರೆಸ್ ಸಂಸದರು ಬರಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯದವರ ಪಾತ್ರ ಹೆಚ್ಚಾಗಿದ್ದು ಕೊಟ್ಟ ಮಾತಿನಂತೆ ಖಬರಸ್ಥಾನಕ್ಕೆ 25 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಲಾಗಿದೆ. ಬಂಧುಗಳ ಕೋರಿಕೆಯಂತೆ ಇನ್ನು 25 ಲಕ್ಷ ಅನುದಾನ ಕೊಡಿಸಲು ಸಿದ್ದ ಎಂದರು.

ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಯು ಅಗತ್ಯವಾಗಿದೆ. ಉದ್ಯೋಗ, ಶಿಕ್ಷಣ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನೇತೃತ್ತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಲ್ಲದೆ ಬಾತಿ ಗ್ರಾಮದಲ್ಲಿನ ದರ್ಗಾವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಿಟುವಳ್ಳಿಯ ದರ್ಗಾವನ್ನು ಅಭಿವೃದ್ಧಿ ಪಡಿಸಲಾಗುವುದು. ಸಮಾಜದ ದುಡ್ಡು ಯಾರೇ ಒಡೆದರು ಉದ್ದಾರ ಆಗಲ್ಲ. ಸಮಾಜದ ದುಡ್ಡು ಸಮಾಜಕ್ಕೆ ಮೀಸಲಿಟ್ಟರೆ ಅಭಿವೃದ್ಧಿ ಸಾಧ್ಯ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾಗಿಯಾಗಿದ್ದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ‌ ಕೊಡುಗೆಯು ಜಿಲ್ಲೆಗೆ ಅಪಾರವಾಗಿದೆ. ಪ್ರಸ್ತುತ ಸಂಸದರ ಕೋಟದಡಿ 3 ಕೋಟಿ 25 ಲಕ್ಷ ಅನುದಾನ ಬಂದಿದ್ದು, ಖಬರಸ್ಥಾನ ಅಭಿವೃದ್ದಿಗೆ 25 ಲಕ್ಷ ಅನುದಾನ ನೀಡಲಾಗಿದೆ. ಮಹಿಳೆಯ ಮತ್ತು ಮಕ್ಕಳ ಆಸ್ಪತ್ರೆ, ರಸ್ತೆ, ಅರೋಗ್ಯ, ರೈತರ ಸಮಸ್ಯೆಗಳು, ಮೂಲ ಭೂತ ಸೌಲಭ್ಯಗಳು ಹಾಗೂ ಸೌಕರ್ಯಗಳು ಸೇರಿದಂತೆ ಅನೇಕ ಕೊರತೆಗಳನ್ನು ನಿವಾರಿಸಲು 25 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ನಿಮ್ಮೆಲ್ಲ ಪಾತ್ರ ದೊಡ್ಡದಿದೆ. ದಾವಣಗೆರೆ ಜಿಲ್ಲೆಯನ್ನು ವಲ್ಡ್ ಫೇಮಸ್ ಮಾಡಲು ನಿಮ್ಮೆಲ್ಲರ ಸಹಕಾರವಿರಲಿ. ಹೊಸ ಚೈತನ್ಯದೊಂದಿಗೆ ಸರ್ವರು ಜಿಲ್ಲೆಯ ಅಭಿವೃದ್ಧಿಗೆ ಪಣತೊಡೋಣ ಎಂದರು.

ಕಾರ್ಯಕ್ರಮದಲ್ಲಿ ತಂಜುಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಜನಾಬ್ ಶೇಕ್ ದಾದಾಪೀರ್, ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಸದಸ್ಯರಾದ ಎ.ಬಿ ರಹೀಂ ಸಾಬ್, ಹರಿಹರದ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಮೌಲಾನ ಮಹಮ್ಮದ್ ಅಲಿಸಾಬ್, ಅಲ್ಲಮಾನ್ ನಿರಾಜ್, ಖಾದ್ರಿಸಾಬ್, ಮಸೀದ್ ಮೌಲಾನ, ನಜೀರ್ ಸಾಬ್, ಖಜಾಂಚಿ ಶಂಶುದ್ದಿನ್ ಸೇರಿದಂತೆ ತಂಜೀಮುಲ್‌ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ನ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಇತರರು ಉಪಸ್ಥಿತರಿದ್ದರು.

*ಹಳೇ ಹೆರಿಗೆ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ತೀರ್ಮಾನ*

ನಗರದ ಹಳೇ ಭಾಗದಲ್ಲಿನ ಹೆರಿಗೆ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ವೇದಿಕೆಯಲ್ಲಿ ತಿಳಿಸಿದರು. 30 ಹಾಸಿಗೆಗಳಿದ್ದ ಆಸ್ಪತ್ರೆಯಲ್ಲಿ ಪ್ರಸ್ತುತ 120 ಹಾಸಿಗೆ ವ್ಯವಸ್ಥೆ ಇದ್ದು ಹೆಚ್ಚುವರಿ ಜಮೀನು ಪಡೆದು 700 ರಿಂದ 800 ಹಾಸಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಸರ್ವರಿಗೂ ಉತ್ತಮ ಆರೋಗ್ಯ ಲಭಿಸಲು ಬಾಪೂಜಿ ಆಸ್ಪತ್ರೆಯ ಸಹಯೋಗದೊಂದಿಗೆ ಅಗತ್ಯ ಕಾರ್ಯಗಳನ್ನು ನಡೆಸಲು ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

*ನಿರ್ಮಿತಿ ಕೇಂದ್ರದವರಿಗೆ ಸಚಿವರಿಂದ ಕ್ಲಾಸ್*

ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಹಲವು ಕಾಮಗಾರಿಗಳು ಕೈ ಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರದವರಿಗೆ ವೇದಿಕೆಯಲ್ಲಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಕ್ಲಾಸ್ ತೆಗೆದುಕೊಂಡರು. ಕಳಪೆ ಕಾಮಗಾರಿ ಮಾಡ್ಬೇಡ್ರಪ್ಪ, ಉತ್ತಮ ಕಾಮಗಾರಿ ಮಾಡ್ರಿ ಎಂದರು. ಖಬರಸ್ಥಾನದ ವಜುಕಾನ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿನ ಕಾಮಗಾರಿಗಳಲ್ಲಿ ಗುಣಮಟ್ಟವಿರಲಿ ಎಂದು ಸಚಿವರು ಸೂಚಿಸಿದರು.

*ಹಿಂದಿಯಲ್ಲಿ ಸಂಸದರ ಭಾಷಣ*

ವೇದಿಕೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಿಂದಿಯಲ್ಲಿ ನೆರದವರಿಗೆಲ್ಲರಿಗೂ ರಂಜಾನ್ ಹಬ್ಬದ ಶುಭವನ್ನು ಕೋರಿ ಬಳಿಕ ಭಾಷಣದೂದ್ದಕ್ಕು ಹಿಂದಿಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು. ತಮ್ಮ ಪತ್ನಿ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಹಿಂದಿ ಭಾಷಣವನ್ನು ಕೇಳಿದ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಸಂಸದರು ಹಿಂದಿ ಮಾತಾಡ್ತಾರೆ ಎಂದು ತಿಳಿದಿದ್ದೆ, ಆದರೆ ಇಷ್ಟು ಚೆನ್ನಾಗಿ ಮಾತಾಡ್ತಾರೆ ಎಂದು ತಿಳಿದಿರಲಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!