ಜೆಡಿಎಸ್ ನಲ್ಲಿ ಸಿ.ಎಂ.ಇಬ್ರಾಹಿಂಗೆ ಗೌರವಯುತ ಸ್ಥಾನ..?

ಬೆಂಗಳೂರು : ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗಲಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರಿಗೆ ಗೌರವಯುತ ಸ್ಥಾನ ನೀಡಲು ಜೆಡಿಎಸ್ ಉದ್ದೇಶಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿದ ಬಳಿಕ ಇಬ್ರಾಹಿಂ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ನೀಡುವ ಸ್ಥಾನಮಾನ, ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಹಾಗೂ ತಮ್ಮ ಬೆನ್ನ ಹಿಂದೆಯೇ ಇತರರು ಸೇರ್ಪಡೆಯಾಗುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸೇರ್ಪಡೆಯ ದಿನಾಂಕವನ್ನು ಇನ್ನು ಅಂತಿಮಗೊಳಿಸಿಲ್ಲ. ಎರಡ್ಮೂರು ದಿನದಲ್ಲಿ ಇಬ್ರಾಹಿಂ ಅವರನ್ನು ಗೌರವಯುತವಾಗಿ ಸೇರ್ಪಡೆ ಮಾಡಿಕೊಳ್ಳುವ ದಿನಾಂಕ ನಿಗದಿಪಡಿಸಲಾಗುತ್ತದೆ. ದೇವೇಗೌಡರ ಆಪ್ತರಾಗಿರುವ ಇಬ್ರಾಹಿಂ ಮರಳಿ ಪಕ್ಷಕ್ಕೆ ಬರುತ್ತಿರುವುದರಿಂದ ಇನ್ನಷ್ಟು ಪಕ್ಷದ ಬಲ ವೃದ್ದಿಸಲಿದೆ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ.