ವಸತಿ, ನಿವೇಶನ ರಹಿತರಿಂದ ಪ್ರತಿಭಟನೆ, ಪಾಲಿಕೆಗೆ ಮುತ್ತಿಗೆ
ದಾವಣಗೆರೆ: ಮೂಲಭೂತ ಸೌಕರ್ಯಗಳೊಂದಿಗೆ ವಸತಿ, ನಿವೇಶನ ರಹಿತರಿಗೆ ವಸತಿ ಹಾಗೂ ನಿವೇಶನ ಕಲ್ಪಿಸುವಂತೆ ಸಿಪಿಐಎಂ ನೇತೃತ್ವದಲ್ಲಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ನಿಟ್ಟುವಳ್ಳಿಯ ಶ್ರೀದುರ್ಗಾಂಬಿಕಾ ದೇವಸ್ಥಾನದಿಂದ ಮಹಾನಗರ ಪಾಲಿಕೆಗೆ ಮೆರವಣಿಗೆ ಮೂಲಕ ಆಗಮಿಸಿ ನಂತರ ಪಾಲಿಕೆಗೆ ಮುತ್ತಿಗೆ ಹಾಕಿದ ವಸತಿ, ನಿವೇಶನ ರಹಿತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಕೆ.ಹೆಚ್.ಆನಂದರಾಜ್, ನಗರದ ವಿವಿಧ ಕಡೆಗಳಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚಿನ ಕಾಲದಿಂದಲೂ ವಸತಿರಹಿತರಾಗಿ ಸಾವಿರಾರು ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ನಿಜವಾದ ಫಲಾನುಭವಿಗಳಿಗೆ ವಸತಿ, ನಿವೇಶನ ವಿತರಣೆ ಮಾಡುವ ಬದಲು ರಾಜಕಾರಣಿಗಳು ತಮ್ಮ ಹಿಂಬಾಲಕರು, ಕುಟುಂಬಗಳು ಸಂಬಂಧಿಕರಿಗೆ ಹಂಚಲಾಗುತ್ತಿದ್ದು, ಕಾರಣ ಪಾಲಿಕೆ ಅಧಿಕಾರಿಗಳು ನೈಜರಿಗೆ ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.
ನಗರದಲ್ಲಿರುವ ಸಿಪಿಹೆಚ್‌ಸಿಗಳನ್ನು ಸಂಜೆ ವೇಳೆ ಮುಚ್ಚಲಾಗುತ್ತಿದೆ. ಇದರಿಂದಾಗಿ ಕೂಲಿಕಾರರಿಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸಂಜೆಯ ನಂತರವೂ ಕ್ಲಿನಿಕ್ ಗಳನ್ನು ತೆರೆಯಬೇಕು. ನೀರಿನ ತೆರಿಗೆ ಕಡಿಮೆ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡುಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕೆಂದು ಆಗ್ರಹಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿನ ಜಾಗಗಳನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಇಂತಹ ಒತ್ತುವರಿ ತೆರವು ಮಾಡಬೇಕು. ವಿದ್ಯಾರ್ಥಿಗಳ ಅನುಕೂಕಲಕ್ಕೆ ಸುಸಜ್ಜಿತ ಗ್ರಂಥಾಲಯ ತೆರೆಯಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಬೇಕು. ಅಲ್ಲದೇ ಜನಸಂಖ್ಯೆಯ ಆಧಾರದಲ್ಲಿ ಅಂಗನವಾಡಿಗಳನ್ನು ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದರು.