ಜೇಮ್ಸ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು?

ಬೆಂಗಳೂರು : ‘ಜೇಮ್ಸ್’ ಸಿನಿಮಾ ರಿಲೀಸ್ ಒಂದು ದಾಖಲೆಯೇ ಸರಿ. ಕನ್ನಡದ ಯಾವ ಚಿತ್ರಗಳಿಗೂ ಸಿಗದಷ್ಟು ಹೈಪ್ ಈ ಚಿತ್ರಕ್ಕೆ ಸಿಕ್ಕಿದೆ. ಯಾವ ಸಿನಿಮಾಗಳಿಗೂ ಸಿಗದ ಥಿಯೇಟರ್‌ಗಳು ಈ ಚಿತ್ರಕ್ಕೆ ಸಿಕ್ಕಿದೆ. ಜೊತೆಗೆ ‘ಜೇಮ್ಸ್’ ಎದುರು ಯಾವ ಸಿನಿಮಾ ಕೂಡ ಇಲ್ಲ. ಇದು ಅಪ್ಪು ಗಳಿಸಿರುವ ಗೌರವ ಅಲ್ಲದೇ ಮತ್ತೇನು ಅಲ್ಲ. ಇಷ್ಟು ದಿನ ಸಿನಿಮಾ ಥಿಯೇಟರ್‌ಗಳು ಮತ್ತು ಶೋಗಳು ದಾಖಲೆ ಮಟ್ಟದಲ್ಲಿ ಇವೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಸಿನಿಮಾದ ಶೋಗಳಿಂದ ಆಗುವ ಕಲೆಕ್ಷನ್ ಎಷ್ಟು ಎನ್ನುವುದು ಸಿನಿಮಾ ರಿಲೀಸ್ ಬಳಿಕವೇ ಗೊತ್ತಾಗಲಿದೆ. ಸಿನಿಮಾ ಥಿಯೇಟರ್‌ಗಳು ಮತ್ತು ಶೋಗಳ ಸಂಖ್ಯೆಯ ಆಧಾರದ ಮೇಲೆ ಸಿನಿಮಾ ಎಷ್ಟು ಗಳಿಕೆ ಮಾಡಬಹುದು ಎನ್ನುವ ಲೆಕ್ಕಾಚಾರ ಹೊರ ಬಿದ್ದಿದೆ. ಸಿನಿಮಾ ರಿಲೀಸ್‌ಗೆ ಮುನ್ನವೇ ಚಿತ್ರದ ಟಿಕೆಟ್ ದರವನ್ನು ಆಧರಿಸಿ ಒಟ್ಟು ಶೋಗಳ ಸಂಖ್ಯೆ ಮತ್ತು ಥಿಯೇಟರ್‌ಗಳ ಸಂಖ್ಯೆಯನ್ನಿಟ್ಟುಕೊಂಡು ಶಿವು ಕೆಎ ಎನ್ನುವವರು ಮಾಡಿರುವ ಲೆಕ್ಕಾಚಾರ ಹೀಗಿದೆ. ಸಿನಿಮಾದ ಅಂದಾಜು ಕಲೆಕ್ಷನ್ ಎಷ್ಟು ಎನ್ನುವುದನ್ನು ಅವರೇ ಬಿಡಿಸಿ ಹೇಳಿದ್ದಾರೆ.


ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಮುಂಜಾನೆ ಐದು ಗಂಟೆಯಿಂದ ರಾತ್ರಿಯವರೆಗೆ ಸೇರಿ, ಆರು ಬಾರಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ದಿನಕ್ಕೆ ಒಂದು ಚಿತ್ರಮಂದಿರದಲ್ಲಿ 6 ಶೋಗಳು ಪ್ರದರ್ಶನಗೊಳ್ಳಲಿವೆ. ಹೀಗೆ 100 ಥಿಯೇಟರ್‌ಗಳಲ್ಲಿ 6 ಶೋಗಳು ಅಂದರೆ, ಅಂದಾಜು 100 ರೂಪಾಯಿ ಲೆಕ್ಕದಂತೆ 6000 ಶೋಗಳು ಅಂತ ಲೆಕ್ಕಾ ಹಾಕಿದರೂ ಕೂಡ ಅಲ್ಲಿ 6 ಕೋಟಿ ಆಗುತ್ತದೆ. ಇನ್ನು ಮಾಲ್‌ಗಳಲ್ಲಿ ಒಂದು ದಿನ 416 ಪ್ರದರ್ಶನಗಳು ಇರುತ್ತೆ ಎನ್ನಲಾಗಿದೆ. 416 ಶೋಗಳು, ಒಂದು ಟಿಕೆಟ್ ಬೆಲೆ 250 ರೂಪಾಯಿ. ಇದರ ಜೊತೆಗೆ ಆಸನಗಳ ಸರಾಸರಿ ಸಂಖ್ಯೆಯನ್ನಿಟ್ಟುಕೊಂಡು ಲೆಕ್ಕ ಹಾಕಿದರೆ 2.5 ಕೋಟಿ ಆಗುತ್ತೆ. ಟಿಕೆಟ್ ಬೆಲೆ ಹೆಚ್ಚಿದ್ದಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಇನ್ನು ಮಾಲ್‌ಗಳಲ್ಲಿ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆ ಸುಮಾರು 1200 ರೂ. ಮತ್ತು 900 ಇದೆ. ಹಾಗಾಗಿ ಸ್ಕ್ರಿನ್ ಮತ್ತು ಸೀಟ್‌ಗಳ ಲೆಕ್ಕ ಹಾಕಿದರೆ, ಅಂದಾಜು 6 ಲಕ್ಷ ಆಗುತ್ತದೆ.


8 ರಿಂದ 9 ಕೋಟಿ ಕಲೆಕ್ಷನ್ ಆಗುತ್ತಾ?
ಒಂದು ಅಂದಾಜು ಲೆಕ್ಕದ ಪ್ರಕಾರ, ಒಟ್ಟಾರೆ ಬೆಂಗಳೂರಿನ ಒಂದು ದಿನದ ಕಲೆಕ್ಷನ್ ಎಂಟು ಕೋಟಿ ಐವತ್ತಾರು ಲಕ್ಷ ಆಗುತ್ತೆ ಎಂದು ಅಂದಾಜಿಸಬಹುದು. ಇದು ‘ಜೇಮ್ಸ್’ ಮೊದಲ ದಿನ ಕೇವಲ ಬೆಂಗಳೂರಿನಲ್ಲಿ ಗಳಿಸಿದ ಮೊತ್ತ ಎನ್ನಬಹುದು. ಇನ್ನು ಟಿಕೆಟ್ ದರ ಹೆಚ್ಚಾದರೆ ಇದು ದುಪ್ಪಟ್ಟಾಗುತ್ತೆ. ಕಡಿಮೆ ಎಂದರೂ ಬೆಂಗಳೂರಿನಲ್ಲಿ ಮೊದಲ ದಿನದ ಕಲೆಕ್ಷನ್ 8 ರಿಂದ 9 ಕೋಟಿಯಾಗಬಹುದು. ಭಾರತದಾದ್ಯಂತ ‘ಜೇಮ್ಸ್’ ಕಲೆಕ್ಷನ್ ಏನಾಗಬಹುದು? ಇನ್ನುಳಿದಂತೆ ಬೆಂಗಳೂರು ಹೊರತುಪಡಿಸಿ, ಕರ್ನಾಟಕದ ಇತರ ಭಾಗಗಳು, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ ಉತ್ತರ ಭಾರತದಾದ್ಯಂತ ಇರುವ ಮಾಲ್ ಮತ್ತು ಥಿಯೇಟರ್‌ಗಳ ಲೆಕ್ಕವೇ ಬೇರೆ. ಇಲ್ಲಿ ಎರಡು ಸಾವಿರ ಶೋ ಇದ್ದರೂ, ಸರಾಸರಿ ಐನೂರು ಆಸನಗಳು ಮತ್ತು ನೂರು ರೂಪಾಯಿ ಟಿಕೆಟ್ ದರದಂತೆ ಲೆಕ್ಕ ಹಾಕಿದರೂ, ದಿನಕ್ಕೆ ನಾಲ್ಕು ಪ್ರದರ್ಶನದಂತೆ 10 ಕೋಟಿ ಗಳಿಕೆ ಆಗುತ್ತದೆ.


ಇನ್ನು ಹೊರ ದೇಶಗಳಲ್ಲಿನ 500 ಪ್ರದರ್ಶನ ಕಂಡಿದೆ ಅಂದುಕೊಂಡರೆ, ಡಾಲರ್ ಲೆಕ್ಕದಲ್ಲಿ ಕಲೆಕ್ಷನ್ ಆಗುತ್ತೆ. ಒಂದು ಶೋಗೆ 250 ಆಸನದಂತೆ, ಒಂದು ಟಿಕೆಟ್ ಬೆಲೆ 1500 ರೂಪಾಯಿ ಆದರೆ, ಒಟ್ಟು ಗಳಿಕೆ 18 ಕೋಟಿ 75 ಲಕ್ಷ ಆಗಬಹುದು. ನಮ್ಮ ಕರ್ನಾಟಕದಷ್ಟು ಹೌಸ್ ಪುಲ್ ಆಗದಿರಬಹುದು. ಅದಕ್ಕೆ ನಾವು ಶೇ.50ರಷ್ಟು ಲೆಕ್ಕ ಹಾಕಿದರೂ 9 ಕೋಟಿ ಆಗುತ್ತೆ. ಒಟ್ಟಾರೆ, ಮೊದಲ ದಿನ ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ಹದಿನೆಂಟರಿಂದ ಇಪ್ಪತ್ತು ಕೋಟಿ ಕಲೆಕ್ಷನ್ ಆಗಬಹುದು. ಇದೇ ಟ್ರೆಂಡ್ ಮುಂದುವರಿದರೆ ಭಾನುವಾರದವರೆಗೆ ಒಟ್ಟಾರೆ 75-80 ಕೋಟಿ ಕಲೆಕ್ಷನ್ ಆಗುತ್ತದೆ. ಇದು ಕೇವಲ ಅಂದಾಜಿನ ಲೆಕ್ಕಾಚಾರ, ಇನ್ನು ಥಿಯೇಟರ್‌ಗಳ ಸಂಖ್ಯೆ ಹೆಚ್ಚಾದರೆ ಖಂಡಿತವಾಗಿ ಕಲೆಕ್ಷನ್ ಹೆಚ್ಚಾಗುವುದಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!