ನಾನು ಸಿಎಂ ಆಗುವುದು ನಿಶ್ಚಿತ: ಯಾರಿಂದಲೂ ತಪ್ಪಿಸಲಾಗದು-ಕುಮಾರ ಸ್ವಾಮಿ
ಮಂಡ್ಯ : ನಾನು ಈ ಬಾರಿ ಮುಖ್ಯಮಂತ್ರಿಯಾಗುವುದು ನಿಶ್ಚಿತ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದ ಹಳ್ಳಿ ಹಳ್ಳಿ ಸುತ್ತಿ ಬಂದಿದ್ದೇನೆ, ರಾಜ್ಯದಾದ್ಯಂತ ಜೆಡಿಎಸ್ ಪರವಾದ ವಾತಾವರಣವಿದೆ. ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ ಎನ್ನುತ್ತಿದ್ದರು. ಆದರೆ ಇಂದು ಆ ಜಿಲ್ಲೆಗಳಲ್ಲೂ ತಲಾ 2–3 ಸ್ಥಾನ ಗೆಲ್ಲುವ ಶಕ್ತಿ ಪಕ್ಷಕ್ಕೆ ಬಂದಿದೆ. ಬಡವರು, ರೈತರು ಹಾಗೂ ಮಹಿಳೆಯರ ಪರ ಆಡಳಿತ ನೀಡುವುದು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ದೇವೇಗೌಡರಿಗೆ, ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಿ, ನನಗೂ ಕೊಡಿ ಎಂದು ಕೇಳುತ್ತಿದ್ದಾರೆ. ಅವರು ಅಧಿಕಾರ ಕೇಳುತ್ತಿರುವುದು ಸಾವಿರಾರು ಕೋಟಿಯ ಲೂಲು ಮಾಲ್ ಕಟ್ಟುವುದಕ್ಕಾ, ಅವರು ಎಂದಾದರೂ ಬಡವರ ಪರ ಕೆಲಸ ಮಾಡಿದ್ದಾರಾ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿರೋಧದ ನಡುವೆಯೂ ನಾನು ರೈತರ ಸಾಲ ಮನ್ನಾ ಮಾಡಿದೆ, ಅವರು ಸಹಕಾರ ಮಾಡದ ಕಾರಣಕ್ಕೆ ಅಧಿಕಾರ ಬಿಟ್ಟೆ. ಕೆಲವರು ನಮ್ಮ ಪಕ್ಷವನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ. ಅವರಾರೂ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಯಾವ ರೈತ ಕುಟುಂಬಕ್ಕೂ ಆರ್ಥಿಕ ನೆರವು ನೀಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನಾನು ನೆರವಾಗಿದ್ದೇನೆ’ ಎಂದರು.
ನಾನು ಮಂಡ್ಯದಲ್ಲಿ ಸ್ಪರ್ಧಿಸುವಂತೆ ಇಲ್ಲಿಯ ಜನರು ಅಪೇಕ್ಷೆ ಪಡುತ್ತಿದ್ದಾರೆ, ಆದರೆ ಚನ್ನಪಟ್ಟಣ ಕ್ಷೇತ್ರದ ಜನರು ಬಿಡುತ್ತಿಲ್ಲ. ಯಾವುದೇ ಕಾರಣಕ್ಕೂ ಮಂಡ್ಯಕ್ಕೆ ಹೋಗಬೇಡಿ ಎನ್ನುತ್ತಿದ್ದಾರೆ, ಅಲ್ಲಿಯ ಜನರು ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ, ನೀವು ಅಲ್ಲಿಗೆ ಹೋದರೆ ಕುತಂತ್ರ ರಾಜಕಾರಣ ಮಾಡಿ ಸೋಲಿಸುತ್ತಾರೆ ಹೋಗಬೇಡಿ ಎಂದು ಕಿವಿಮಾತು ಹೇಳುತ್ತಿದ್ದಾರೆ’ ಎಂದರು.
ಸಂಸದೆ ಸುಮಲತಾ ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ, ಮಂಡ್ಯ ಸ್ಪರ್ಧೆಯ ಬಗ್ಗೆ ಸವಾಲು ಹಾಕುತ್ತಿದ್ದಾರೆ. ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ನಾನು ಸ್ಪರ್ಧಿಸುವುದಿಲ್ಲ, ಒಬ್ಬ ಸಾಮಾನ್ಯ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆ’ ಎಂದರು.