ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ
ಬೆಂಗಳೂರು : ಐಸಿಸಿ ನೂತನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಭಾರತದ ವೇಗಿ ಜಸ್ಪಿತ್ ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಕುಸಿತ ಕಂಡಿದ್ದು 9ನೇ ಸ್ಥಾನಕ್ಕೆ ಇಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಬೆಂಗಳೂರಿನಲ್ಲಿ ನಡೆದಿದ್ದ 2ನೇ ಪಂದ್ಯದಲ್ಲಿ ವೇಗಿ ಜಸ್ಪಿತ್ ಬೂಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು. ಅಹರ್ನಿಶಿಯಾಗಿ ನಡೆದಿದ್ದ ಈ ಪಂದ್ಯದಲ್ಲಿ ಬೂಮ್ರಾ ಒಟ್ಟು 8 ವಿಕೆಟ್ ಸಂಪಾದಿಸಿದ್ದಾರೆ. ಈ ಬೌಲಿಂಗ್ ಸಾಧನೆಯ ಕಾರಣದಿಂದಾಗಿ ಬೂಮ್ರಾ ಎರಡು ಸ್ಥಾನಗಳ ಏರಿಕೆ ಕಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬೂಮ್ರಾ 6ನೇ ಸ್ಥಾನದಲ್ಲಿದ್ದರು. ಈಗ ಅವರು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಈ ಮೂಲಕ ಶಾಹೀನ್ ಅಫ್ರಿದಿ, ಕೈಲ್ ಜೇಮಿಸನ್, ಟಿಮ್ ಸೌಥೀ, ಜೇಮ್ಸ್ ಆಂಡರ್ಸನ್, ನೀಲ್ ವ್ಯಾಗ್ನರ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿದ್ದಾರೆ.