ಶಿರಮಗೊಂಡನಹಳ್ಳಿ ರಿ.ಸ.ನಂ.57, 62 ರಲ್ಲಿ ಅಕ್ರಮ ಸೈಟ್ ನಿರ್ಮಾಣ.!ರದ್ದುಗೊಳಿಸುವಂತೆ ಹರೀಶ್ ಆಗ್ರಹ

ಶಿರಮಗೊಂಡನಹಲ್ಳಿ ರಿ.ಸ.ನಂ.57, 62 ರಲ್ಲಿ ಅಕ್ರಮ ಸೈಟ್
ದಾವಣಗೆರೆ :ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಶಿರಮಗೊಂಡನಹಳ್ಳಿ ರಿ.ಸ.ನಂ.57 ಹಾಗೂ 62ರ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಅನುಮೋದಿತ ನಕ್ಷೆಯಲ್ಲಿ ಸಿದ್ಧಪಡಿಸಿರುವ 238 ಸೈಟುಗಳನ್ನು ಹೊರತುಪಡಿಸಿ, ಅಕ್ರಮವಾಗಿ 280 ಸೈಟುಗಳನ್ನು ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹೆಚ್.ಆರ್. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಶಿರಮಗೊಂಡನಹಳ್ಳಿ ರಿ.ಸ.ನಂ.57 ಹಾಗೂ 62ರ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರಲ್ಲಿ ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಂತಿಮ ಅನುಮೋದಿತ ವಿನ್ಯಾಸ ನಕ್ಷೆ ಸಿದ್ಧಪಡಿಸಲಾಗಿದೆ. 9.2.23ರವರೆಗೆ ಈ ವಿನ್ಯಾಸವನ್ನು ಯಾವುದೇ ರೀತಿ ಮಾರ್ಪಡಿಸಿಲ್ಲ.
ಆದಾಗ್ಯೂ ಅನುಮೋದಿತ ನಕ್ಷೆಯಲ್ಲಿ ಸಿದ್ಧಪಡಿಸಿರುವ 238 ಸೈಟುಗಳನ್ನು ಹೊರತುಪಡಿಸಿ, ಪಂಚಾಯ್ತಿಯ ಜಾಗ, ಶಾಪಿಂಗ್ ಕಾಂಪ್ಲೆಕ್ಸ್ ಜಾಗ, ಬ್ಯಾಂಕ್ ಜಾಗ, ಕೋ ಆಪರೇಟಿವ್ ಸೊಸೈಟಿ ಜಾಗ, ಪ್ಲೇ ಗ್ರೌಂಡ್, ಪಾರ್ಕ್, ಕಮ್ಯೂನಿಟಿ ಹಾಲ್, ಸರ್ವೀಸ್ ಇಂಡಸ್ಟ್ರೀ ಜಾಗವನ್ನು ಹೆಚ್ಚುವರಿಯಾಗಿ 280 ಸೈಟ್‌ಗಳನ್ನಾಗಿ ಮಾಡಿ ಹಲವರ ಹೆಸರಿಗೆ ಖಾತೆ ಮಾಡಲಾಗಿದೆ ಎಂದು ಹರೀಶ್ ಆರೋಪಿಸಿದರು.
ಈ ಪ್ರಕರಣದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಹೆಸರು ಕೇಳಿ ಬರುತ್ತಿದ್ದು, ಅವರು ಉತ್ತರಿಸಬೇಕು ಎಂದು ಹೇಳಿದರು.
8 ಎಕರೆ 16 ಗುಂಟೆಯ ಸುಮಾರು 25 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗ ಇದಾಗಿದ್ದು, ಕೂಡಲೇ ಎಲ್ಲಾ ಖಾತೆಗಳನ್ನು ರದ್ದುಗೊಳಿಸದಿದ್ದರೆ ಮಹಾನಗರ ಆಯುಕ್ತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.