ಲೋಕಲ್ ಸುದ್ದಿ

ದಾವಣಗೆರೆಯಲ್ಲಿ ನಡೆದ ಅದ್ದೂ ಮುಸ್ಲಿಂ ಬಾಂಧವ್ಯ ವೇದಿಕೆಯ ಪದಗ್ರಹಣ ಸಮಾರಂಭ

Davangere, Muslim Bond Forum, Photographic Ceremony,
ದಾವಣಗೆರೆ: ಸಾಮಾಜಿಕ ಬಾಂಧವ್ಯದ ಆಶಯ ಹೊಂದಿರುವ ಮುಸ್ಲಿಂ ಸಮುದಾಯದ ಧರ್ಮಗುರುಗಳು, ಲೇಖಕರು, ಚಿಂತಕರು, ಸಾಹಿತಿಗಳು ಮತ್ತು ಸಾಧಕರ ವೇದಿಕೆಯಾದಂತಹ ಮುಸ್ಲಿಂ ಬಾಂಧವ್ಯ ವೇದಿಕೆಯ ವಾರ್ಷಿಕ ಪದವಿ ಪ್ರದಾನ ಸಮಾರಂಭವು ದಾವಣಗೆರೆಯ ಬಾಪೂಜಿ ಸಭಾಭವನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ವೇದಿಕೆಯ ನೂತನ ಪದಾಧಿಕಾರಿಗಳಿಗೆ ನಿವೃತ್ತ ನ್ಯಾಯಾಧೀಶರಾದ ವಿಜಯಪುರದ ನಬಿರಸೂಲ್ ಮಹಮದಾಪುರರವರು ಪದವಿ ಪ್ರದಾನಗೈದರು. ದಾವಣಗೆರೆಯ ನ್ಯಾಯವಾದಿ ಅನೀಸ್ ಪಾಷಾ ಅಧ್ಯಕ್ಷರಾಗಿ ಮತ್ತು ಉಡುಪಿಯ ಮುಷ್ತಾಕ್ ಹೆನ್ನಾಬೈಲ್ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಬಿರಸೂಲ್ ಮಹಮದಾಪುರ್ ” ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಬಹಳಷ್ಟು ವೇದಿಕೆ-ಸಂಘಟನೆಗಳು ರಾಜ್ಯ ಕಂಡಿದೆ. ಆದರೆ ಈ ವೇದಿಕೆ ಸಮುದಾಯದ ಅತ್ಯಂತ ಪ್ರಜ್ಞಾವಂತರು ಮತ್ತು ಪ್ರಬುದ್ಧ ಸಾಧಕರಿಂದ ಕೂಡಿದ ಸಂಘಟನೆಯಾಗಿದೆ. ಇದು ಸಮಾಜದ ಎಲ್ಲ ವರ್ಗದವರಲ್ಲೂ ಬಹಳ ನಿರೀಕ್ಷೆ ಮೂಡಿಸಿದೆ. ಒಂದು ವರ್ಷದ ಹಿಂದೆ ಹುಟ್ಟಿದ ಈ ಸಂಘಟನೆ ರೂಪುಗೊಂಡ ರೀತಿ ಮತ್ತು ಇದರ ಸಾಮಾಜಿಕ ಕಾರ್ಯಕ್ರಮಗಳನ್ನು ನೋಡಿದರೆ ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ಸಮುದಾಯದ ಸರ್ವಕ್ಷೇತ್ರದ ಆಯ್ದ ಸಾಧಕರನ್ನು ಹೊಂದಿರುವ ರಾಜ್ಯದ ಬೇರೆ ಬೇರೆ ಭಾಗದವರಿಂದ ಕೂಡಿದ ಮುಸ್ಲಿಂ ಸಮುದಾಯದ ಮೊದಲ ಸಂಘಟನೆಯಿದು. ಇಲ್ಲಿಂದ ಹೊರಡುವ ಪ್ರತೀ ಮಾತುಗಳು ಮತ್ತು ಕಾರ್ಯಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾಗುವುದರ ಮೂಲಕ ಭವಿಷ್ಯದಲ್ಲಿ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ವೇದಿಕೆ ದೊಡ್ಡಮಟ್ಟದಲ್ಲಿ ಸಹಕಾರಿಯಾಗುವ ವಿಶ್ವಾಸವಿದೆ” ಎಂದರು..
ವೇದಿಕೆಯ ನೂತನ ಅಧ್ಯಕ್ಷರಾದ ಅನಿಸ್ ಪಾಷಾರವರು ಮಾತನಾಡಿ ಯಾವುದೇ ಒಂದು ಸಮುದಾಯ ಮುಂದುವರೆಯ ಬೇಕಾದರೆ ಆ ಸಮುದಾಯದ ನಾಯಕರ ಮುಂದಾಳತ್ವದ ಅವಶ್ಯಕತೆ ಇದೆ, ಆದರೆ ಮುಸ್ಲಿಂ ಸಮುದಾಯದಲ್ಲಿ ಈಗ ನಾಯಕತ್ವದ ಕೊರತೆ ಇದೆ. ಈ  ಸಂಘಟನೆಯು ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಮುದಾಯದ ಮಧ್ಯ ಬಾಂಧವ್ಯದ ಕೊಂಡಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ನೂತನ ಅಧ್ಯಕ್ಷ ಅನೀಸ್ ಪಾಶಾರವರನ್ನು ಸಮಾಜಸೇವೆಗಾಗಿ ಸಮ್ಮಾನಿಸಲಾಯಿತು. 2024-25 ನೇ ಸಾಲಿಗೆ ಆಯ್ಕೆಯಾದ ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ನೂತನ ಅಧ್ಯಕ್ಷರ ಪರಿಚಯ ಮಾಡಿದರು. ಸದಸ್ಯ ಅಸ್ಲಮ್ ಹೈಕಾಡಿ ನೂತನ ಕಾರ್ಯದರ್ಶಿಯವರ ಪರಿಚಯ ಮಾಡಿದರು. ಕಾರ್ಯದರ್ಶಿ ಲೇಖಕ ಮುಷ್ತಾಕ್ ಹೆನ್ನಾಬೈಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸೈಯದ್ ನಿಜಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಕ್ ರೌಫ್ ವಂದನಾರ್ಪಣೆಗೈದರು. ವೇದಿಕೆಯಲ್ಲಿ ಧರ್ಮಗುರುಗಳು ಹಾಗೂ ವೇದಿಕೆಯ ಗೌರವಾಧ್ಯಕ್ಷರ‍ಾದ ಮಂಗಳೂರಿನ ಎಸ್. ಬಿ. ದಾರಿಮಿ, 2024-25ರ ಸಾಲಿಗೆ ಆಯ್ಕೆಯಾದ ಅಧ್ಯಕ್ಷ ಹಾವೇರಿಯ ಹಿರಿಯ ಕವಿ ಖಾದರ್ ಮೊಹಿಯುದ್ದೀನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸೌಹಾರ್ದ ಕಾರ್ಯಕ್ರಮದ ಭಾಗವಾಗಿ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿಗಳನ್ನು ಮಠದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿತು.
Click to comment

Leave a Reply

Your email address will not be published. Required fields are marked *

Most Popular

To Top