ಬಿಜೆಪಿಗೆ ಸುದೀಪ್ ರಾಯಭಾರಿ ಆಗಿರುವುದು ಹಾಸ್ಯಾಸ್ಪದ
ದಾವಣಗೆರೆ: ಬಿಜೆಪಿ ಜನವಿರೋಧಿ ಆಡಳಿತ ನಡೆಸಿ ಜನರಿಗೆ ಮುಖ ತೋರಿಸಲಾಗದೆ ನಟ ಸುದೀಪ್ ಅವರನ್ನು ಪಕ್ಷದ ಪರ ಪ್ರಚಾರಕ್ಕೆ ಇಳಿಸಿರುವುದು ಹಾಸ್ಯಾಸ್ಪದ ಸಂಗತಿ ಎಂದು ಕಾಂಗ್ರೆಸ್‌ನ ಜಗಳೂರು ಕ್ಷೇತ್ರದ ಆಕಾಂಕ್ಷಿ ಎಂ. ಹನುಮಂತಪ್ಪ ತುಪ್ಪದಹಳ್ಳಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಮೂಗು ತೂರಿಸಿ, ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಒಡೆದಾಳುವ ನೀತಿ ಅನುಸರಿಸಿ ರಾಜ್ಯದಲ್ಲಿ ಆಡಳಿತ ನಡೆಸಿದೆ. ಅನೇಕ ಸುಳ್ಳುಗಳನ್ನು ಹೇಳಿ, ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಭ್ರಮನಿರಸನ ಮಾಡಿದೆ. ಈಗ ಇವರಿಗೆ ಮತ ಕೇಳಲು ಮುಖವಿಲ್ಲದೆ ಪಕ್ಷಕ್ಕೆ ಸೇರದ ನಟ ಸುದೀಪ್ ಅವರನ್ನು ರಾಯಭಾರಿ ಮಾಡಿಕೊಂಡಿದೆ ಎಂದು ಕುಟುಕಿದ್ದಾರೆ.
ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ದಿ. ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ವೇಳೆ ನಾಯಕ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದ್ದು, ಇದಕ್ಕೆ ನಾಯಕ ಸಮಾಜ ಕಾಂಗ್ರೆಸ್‌ಗೆ ಋಣಿಯಾಗಿರಬೇಕೆಂದು ಅವರು ತಿಳಿಸಿದ್ದಾರೆ.