ಜಾಗತೀಕರಣದ ಭರಾಟೆಗೆ ರೈತರು, ಕಲಾವಿದರು ಶೋಷಣೆಗೊಳಗಾಗಿದ್ದಾರೆ: ಎಲ್. ಹೆಚ್. ಅರುಣಕುಮಾರ್

IMG-20210831-WA0009

ದಾವಣಗೆರೆ: ಜಾಗತೀಕರಣ ವ್ಯವಸ್ಥೆಯಲ್ಲಿ ಹೆಚ್ಚು ಶೋಷಣೆಗೆ ಒಳಗಾದವರು ರೈತರು ಹಾಗೂ ಕಲಾವಿದರು. ಕೋವಿಡ್‌ನಿಂದಾಗಿ ರಂಗಭೂಮಿ ಕಲಾವಿದರು ಜೀವನೋಪಾಯ ಸಂಕಷ್ಟದಲ್ಲಿದೆ. ಆದರೆ ಅವರ ನೆರವಿಗೆ ಸರ್ಕಾರ ಧಾವಿಸಬೇಕಿದೆ ಎಂದು ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು..

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಸವಿನೆನಪಿಗಾಗಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ನಡೆದ ರಂಗ ಕಾರ್ಯಾಗಾರ, ಮೂಡಲಪಾಯ, ಬಯಲಾಟ ಉತ್ಸವ ಹಾಗೂ ಗ್ರಾಮೀಣ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ರಂಗಭೂಮಿ, ವಿವಿಧ ಜಾನಪದ ಪ್ರಕಾರಗಳು ಜೀವಂತ ಕಲೆಗಳಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಗುರುತರವಾದ ಜವಬ್ದಾರಿ ಸಮಾಜ ಮತ್ತು ಸರ್ಕಾರಗಳ ಮೇಲಿದೆ. ಜಾನಪದ ಕಲೆಗಳು ಉಳಿದರೆ ಮಾತ್ರ ನಮ್ಮ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ. ಆದರೆ ಇಂದು ರಂಗಭೂಮಿ ಮತ್ತು ವಿವಿಧ ಜಾನಪದ ಕಲೆಗಳು ಜನಮಾನಸದಿಂದ ಕಣ್ಮರೆಯಾಗುತ್ತಿರುವುದು ಶೋಚನೀಯ ಎಂದು ಹೇಳಿದರು.

ಮೈಸೂರಿನ ರಂಗ ತಜ್ಞ ಪಾಪು ಶ್ರೀನಿವಾಸ್ ಮಾತನಾಡಿ, ಮಾಧ್ಯಮಗಳೆಂದರೆ ಕೇವಲ ಪತ್ರಿಕೆ ಹಾಗೂ ಟೆಲಿವಿಷನ್‌ಗಳಲ್ಲ. ನಾಟಕವೂ ಮಾಧ್ಯಮವೇ. ಜಾನಪದ ಕಲಾವಿದರು ಜೀವಂತವಾಗಿ ಜನರಿಗೆ ಸುದ್ದಿ ಮುಟ್ಟಿಸುವುದರಿಂದ ಮಾಧ್ಯಮದವರೇ ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ಈ ಕಲಿಪ್ರಪಂಚದಲ್ಲಿ ದುಷ್ಟತನಕ್ಕೆ ಪ್ರಾಣವನ್ನು ಮುಡುಪಾಗಿಡುತ್ತಿದ್ದು. ರಕ್ತಗತವಾಗಿ ಕಂಗೊಳಿಸುತ್ತಿದೆ. ಇಂತಹ ದುರ್ನೀತಿ, ದುರ್ನನಡತೆ, ದುರ್ಬುದ್ಧಿಯನ್ನು ಓಡಿಸುವ ಶಕ್ತಿ ಯಾರಿಗಾದರೂ ಇದ್ದರೆ ಅವರು ಕಲಾವಿದರು ಮಾತ್ರ. ಜ್ಞಾನ ಇಲ್ಲದೇ ಇರುವ ಕಲಾವಿದರು ಗಾಯನವನ್ನು ನುಡಿಸಿ ಮಾನವನ ಹೃದಯವನ್ನು ಮಂದಿರ ಮಾಡುತ್ತಿರುವವರು ಕಲಾವಿದರು. ದುರಂಹಕಾರವಿಲ್ಲದೇ ಬದುಕುತ್ತಿರುವವರು ಕಲಾವಿದರು’ ಎಂದು ಶ್ಲಾಘಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಹಿರಿಯ ಕಲಾವಿದ ಕೆ.ಪಿ. ಭೂತಯ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ರಾಧ, ರಂಗ ಸಂಘಟಕ ಸಿ.ಎಂ. ಸುರೇಶ್ ಇದ್ದರು. ಎಚ್.ಎಂ. ಸದಾನಂದ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!