ಜೈಲ್ ಲಿಂಕ್ ವ್ಯವಹಾರ: 8 ಶಿಕ್ಷಕರ ಅಮಾನತು
ಚಿತ್ರದುರ್ಗ: ಶಿಕ್ಷಕ ವೃತ್ತಿಯನ್ನು ದುರುಪಯೋಗ ಪಡಿಸಿಕೊಂಡು ಆನ್‌ಲೈನ್ ಸಭೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಂಟು ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರವಿಕುಮಾರ್, ರಾಮಗಿರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀನಿವಾಸ್, ಹಿರಿಯೂರು ತಾಲ್ಲೂಕು ಗುಯಿಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿದ್ದಮ್ಮ, ಪಾಲವ್ವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂದ್ರಾಣಿ, ಹಿಂಡಸಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಲಜಾ, ಪರಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜುಳಾ ಶ್ರೀನಿವಾಸ್, ರಂಗಪ್ಪ ಹಾಗೂ ಚಿತ್ರದುರ್ಗ ತಾಲ್ಲೂಕಿನ ದೊಡ್ಡಲಾಘಟ್ಟದ ಸರ್ಕಾರಿ ಪ್ರೌಢಶಾಲೆಯ ಶಿವಕುಮಾರ್ ಅಮಾನತುಗೊಂಡ ಶಿಕ್ಷಕರು.
ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 500 ಶಿಕ್ಷಕರು ಚೈನ್‌ಲಿಂಕ್ ವ್ಯವಹಾರದಲ್ಲಿ ತೊಡಗಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ವೃತ್ತಿಯನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ಸಭೆ ನಡೆಸುತ್ತಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಹೊಳಲ್ಕೆರೆಯ ಕೆ.ಮಲ್ಲಿಕಾರ್ಜುನ್ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಈ ಆರೋಪದಡಿ 16 ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಈ ವೇಳೆ 8 ಶಿಕ್ಷಕರು ಅಗತ್ಯ ದಾಖಲೆ ಸಲ್ಲಿಸಿ ವಿವರಣೆ ನೀಡಿದ್ದರು. ಉಳಿದವರು ವಿಚಾರಣೆ ಹಂತದಲ್ಲಿ ಕೇಳಿದ ಮಾಹಿತಿ, ದಾಖಲೆ ಸಲ್ಲಿಸಲು ವಿಳಂಬ ನೀತಿ ಅನುಸರಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಸ್ತು ಪ್ರಾಧಿಕಾರಿಯೂ ಆಗಿರುವ ಉಪನಿರ್ದೇಶಕ ಕೆ. ರವಿಶಂಕರೆಡ್ಡಿ ಅವರು 8 ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.