ಜಿಲ್ಲೆಯಲ್ಲಿ ಬಾಲಕಾರ್ಮಿಕ ಸಮೀಕ್ಷೆ ಸರ್ವೆಗೆ ಡಿಸಿ ಸೂಚನೆ
ದಾವಣಗೆರೆ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಗೆ ಸರ್ಕಾರ 2 ಲಕ್ಷ ರೂ., ಬಿಡುಗಡೆ ಮಾಡಿದ್ದು, ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಯಶಸ್ವಿಯಾಗಿ ಸರ್ವೆ ಕಾರ್ಯ ಮುಗಿಸಬೇಕಿದೆ. ಈ ನಿಟ್ಟಿನಲ್ಲಿ ಆಸಕ್ತ ಸಂಸ್ಥೆಗಳನ್ನು ಪ್ರಕಟಣೆ ಮೂಲಕ ಆಹ್ವಾನಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆಯ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಸೆ.15 ರೊಳಗಾಗಿ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರನ್ನು ಸಂಪರ್ಕಿಸಬೇಕು. ಹಾಗೂ ಸೆ.30 ರೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡಬೇಕು. ಈ ತಿಂಗಳೊಳಗಾಗಿ ವರದಿ ನೀಡಲು ಸಾಧ್ಯವಾಗದಿದ್ದಲ್ಲಿ ದಿನಾಂಕವನ್ನು ಮುಂದುವರೆಸಲು ಸೂಚಿಸಲಾಗುವುದು ಎಂದರು.
ಬಾಲಕಾರ್ಮಿಕ ಮಕ್ಕಳ ಸಮೀಕ್ಷೆ ಕೇವಲ ನಾಮಕಾವಸ್ಥೆಯ ಕೆಲಸವಾಗದೆ, ಬಾಲಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸುವ ಅರ್ಥಪೂರ್ಣ ಕಾರ್ಯವಾಗಬೇಕು. ಸಮೀಕ್ಷೆ ನಡೆಸಲು ತಂಡಗಳನ್ನು ರಚಿಸಬೇಕಿದ್ದು, ಪ್ರತಿ ತಂಡಕ್ಕೆ 7 ಜನರಂತೆ ತಾಲ್ಲೂಕುವಾರು ತಂಡಗಳನ್ನು ರಚಿಸಲಾಗುವುದು.
ಈ ತಂಡಗಳ ಅಧ್ಯಕ್ಷತೆಯನ್ನು ಆಯುಕ್ತರು ವಹಿಸಲಿದ್ದು, ಕಂದಾಯ ಇಲಾಖೆಯ ಆಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಬ್‌ಇನ್ಸ್ ಪೆಕ್ಟರ್ ಅವರು ಇರುತ್ತಾರೆ. ಹಾಗೂ ಬಾಲಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಂದ ಶೀಘ್ರ ಅರ್ಜಿ ಆಹ್ವಾನಿಸಲಿದ್ದು, ಸಮೀಕ್ಷಾ ಕಾರ್ಯಕ್ಕೆ ದಿನಕ್ಕೆ 200 ರೂ. ನಂತೆ ಗೌರವಧನ ನೀಡಲಾಗುವುದು ಎಂದರು.
ಬಾಲಕಾರ್ಮಿಕರನ್ನು ದುಡಿಮೆಗೆ ಹಚ್ಚಿದರೆ ಅವರ ಮನಸ್ಸು ಹಾಗೂ ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿಯ ಒತ್ತಡ, ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ದುಡಿಮೆಗೆ ಹಚ್ಚುವುದರಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು.
ಸಹಾಯಕ ಕಾರ್ಮಿಕ ಆಯುಕ್ತರಾದ ಎಸ್.ಆರ್. ವೀಣಾ ಮಾತನಾಡಿ, ಬಾಲ್ಯವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೇಯ (ವಾರೆಂಟ್ ರಹಿತ ಬಂಧಿಸಬಹುದಾದ) ಅಪರಾಧವಾಗಿದೆ ಎಂದರು.
ಯೋಜನಾ ನಿರ್ದೇಶಕರಾದ ಪ್ರಸನ್ನಕುಮಾರ್ ಮಾತನಾಡಿ, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲಿಕರಿಗೆ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ 50 ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷೆ ಇದ್ದು, ಪುನರಾವರ್ತಿತ ಅಪರಾಧಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಹಾಗೂ ಕಾನೂನನ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ 20 ಸಾವಿರ ರೂ. ಗಳನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‌ಓ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಕಾರ್ಮಿಕ ನಿರೀಕ್ಷಕರಾದ ನಾಗೇಶ್ ಹಿರೇಮಠ್, ರಾಜಪ್ಪ, ಕವಿತಾಕುಮಾರಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು