ಪತ್ರಕರ್ತರ ನಡಿಗೆ ‘ಬ್ರಹ್ಮಗಿರಿ ಬೆಟ್ಟ’ ದ ಕಡೆಗೆ.! ಗಾಯನದ ಇಂಪು ನೀಡಿತು ಮನಕೆ ತಲ್ಲಣ

IMG-20211226-WA0004

ಚಿತ್ರದುರ್ಗ: ನಿಶ್ಯಬ್ಧದ ಗುಡ್ಡಗಾಡಿನಲ್ಲಿ ಮನಸ್ಸಿಗೆ ಮುದ ನೀಡುತ್ತಿದ್ದ ಜೀವರಾಶಿಗಳ ಸದ್ದು. ಕಲ್ಲುಬಂಡೆಗಳ ಇಳಿಜಾರು, ಪ್ರಪಾತ, ಗುಹೆ, ಇವುಗಳ ಮಧ್ಯೆ ಹೆಮ್ಮೆರವಾಗಿ ಬೆಳೆದು ಹಸಿರನ್ನು ಹೊದ್ದಂತೆ ಕಾಣುತ್ತಿದ್ದ ಪ್ರಕೃತಿಯ ಸೊಬಗು. ಮತ್ತೊಂದೆಡೆ ಸುಗಮ ಸಂಗೀತ, ಜನಪದ ಸಂಗೀತ ಹಾಗೂ ದೇಶಭಕ್ತಿ ಗೀತೆಗಳ ಗಾಯನ ಇಂಪು ನೀಡಿತು.

ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಸಂಗತಿಗಳನ್ನು ಹೊಂದಿರುವ ಮೊಳಕಾಲ್ಮುರು ತಾಲ್ಲೂಕಿನ ಗುಡ್ಡಗಾಡು ಪ್ರದೇಶ ಹಾಗೂ ಐತಿಹಾಸಿಕ ಸ್ಥಳವಾದ ಅಶೋಕ ಸಿದ್ದಾಪುರದ ಬ್ರಹ್ಮಗಿರಿ ಬೆಟ್ಟದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ “ಪತ್ರಕರ್ತರ ನಡಿಗೆ ಬ್ರಹ್ಮಗಿರಿ ಬೆಟ್ಟದ ಕಡೆಗೆ” ಕಾರ್ಯಕ್ರಮದಲ್ಲಿ ಪತ್ರಕರ್ತರು ಪ್ರಕೃತಿಯ ಮಡಿಲಿನಲ್ಲಿ ಸಂಗೀತ ಆಲಿಸಿ ಸಂತಸಪಟ್ಟರು.

ಮೊಳಕಾಲ್ಮುರಿನ ಚಿಕ್ಕೋಬನಹಳ್ಳಿಯ ಕೀರ್ತಿ ಶಿಕ್ಷಣ ಮತ್ತು ಸಾಮಾಜಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಎಂ.ತ್ರಿವೇಣಿ ಮತ್ತು ತಂಡದವರು ಸುಗಮ ಸಂಗೀತ, ದೇಶಭಕ್ತಿ ಗೀತೆ ಹಾಗೂ ಲೋಕೇಶ್ ಪಲ್ಲವಿ ತಂಡದವರು ಜನಪದ ಸಂಗೀತ ನಡೆಸಿಕೊಟ್ಟರು.

ಶಂಖನಾದ, ಸಿಂಹ ಘರ್ಜನೆಯ ಬ್ರಹ್ಮಗಿರಿ: ಮೌರ್ಯ ಸಾಮ್ರಜ್ಯದ ದಕ್ಷಿಣ ತುದಿ ಎಂದೇ ಖ್ಯಾತಿ ಪಡೆದಿರುವ ಅಶೋಕ ಸಿದ್ದಾಪುರ ಸಮೀಪದ ಬ್ರಹ್ಮಗಿರಿ ಬೆಟ್ಟದ ಸಿದ್ದೇಶ್ವರ ಮಠದ ಬಾಗಿಲು ತೆರೆಯುವಾಗ ಶಂಖನಾದ, ಮುಚ್ಚುವಾಗ ಸಿಂಹ ಘರ್ಜನೆ ಶಬ್ದ ಕಣ್ಮನ ಸೆಳೆಯಿತು.

ಬ್ರಹ್ಮಗಿರಿ ಬೆಟ್ಟದಲ್ಲಿನ ಅಕ್ಕ-ತಂಗಿ ದೇವಸ್ಥಾನಗಳು, ಬ್ರಹ್ಮಗಿರಿ ಬೆಟ್ಟ, ಬೆಟ್ಟದಲ್ಲಿರುವ ಅನೇಕ ಚಿಕ್ಕ ಚಿಕ್ಕ ದೇವಸ್ಥಾನಗಳು, ರಾಮಾಯಾಣದ ಐತಿಹ್ಯದ ರಾಮೇಶ್ವರ ದೇವಸ್ಥಾನ, ಜಟಾಯು ಪಕ್ಷಿ ಸಮಾಧಿ, ಬೆಟ್ಟದ ತಪ್ಪಲಿನಲ್ಲಿರುವ ಜೈನ ಬಸದಿಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಮಾತನಾಡಿ, ಮೊಳಕಾಲ್ಮುರು ಪಟ್ಟಣ ಸೇರಿದಂತೆ ತಾಲ್ಲೂಕು ಗುಡ್ಡಗಾಡು ಪ್ರದೇಶ ಹಾಗೂ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಮೋಹಕ ಮತ್ತು ಗುಣಮಟ್ಟ ರೇಷ್ಮೆಸೀರೆ ತಯಾರಿಕೆಗೆ ಮೊಳಕಾಲ್ಮುರು ತಾಲ್ಲೂಕು ಖ್ಯಾತಿ ಪಡೆದಿದೆ. ಇಲ್ಲಿ ಕೈಮಗ್ಗಗಳಿಂದ ತಯಾರಾಗುವ ರೇಷ್ಮೆಸೀರೆಗಳು ವಿದೇಶದಲ್ಲೂ ಖ್ಯಾತಿ ಪಡೆದುಕೊಂಡಿವೆ ಎಂದರು.

ಚಿತ್ರದುರ್ಗದ ಪುರಾತನ ಪಟ್ಟಣವೆಂದೇ ಹೆಸರುವಾಸಿಯಾಗಿರುವ ಅಶೋಕ ಸಿದ್ದಾಪುರ ಬ್ರಹ್ಮಜಗಿರಿ ಬೆಟ್ಟ ಉತ್ತಮ ಪ್ರೇಕ್ಷಣೀಯ ಪ್ರವಾಸಿ ತಾಣವಾಗಬೇಕಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದು ಪ್ರವಾಸಿಗರನ್ನು ಆಕರ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬ್ರಹ್ಮಗಿರಿ ಬೆಟ್ಟದ ಅಶೋಕ ಸಿದ್ದಾಪುರ ಕುರಿತಂತೆ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಮೊಳಕಾಲ್ಮುರಿನ ಜಿ.ಎಸ್.ವಸಂತ ಮಾಸ್ಟರ್ ಅವರ ರಚನೆಯ ತ್ರಿವಿಧ ದಾಸೋಹಿ ಶರಣ ಶ್ರೀ ಮಹದೇವಪ್ಪ ತಾತನವರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿ, ಮೊಳಕಾಲ್ಮುರಿನ ಮುಖಂಡರಾದ ಚಂದ್ರಶೇಖರ್ ಗೌಡ, ಸಂಗೀತ ಶಿಕ್ಷಕ ಶಿವಣ್ಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ಅರುಣ್ ಕುಮಾರ್ ಹಾಗೂ ಜಿಲ್ಲೆಯ ಪತ್ರಕರ್ತರಾದ ಬಸವರಾಜ ಮುದನೂರು, ಶ.ಮಂಜುನಾಥ್, ಶ್ರೀನಿವಾಸ್, ಗೌನಹಳ್ಳಿ ಗೋವಿಂದಪ್ಪ, ಮಾಲತೇಶ್ ಅರಸ್, ವೀರೇಶ್, ವಿರೇಂದ್ರ, ಎಸ್.ಟಿ.ನವೀನ್ ಕುಮಾರ್, ಸುರೇಶಬಾಬು, ಕುಮಾರ್, ಎಸ್.ಚಂದ್ರಶೇಖರ್, ಹೆಚ್.ತಿಪ್ಪಯ್ಯ, ಎಂ.ಜೆ.ಬೋರೇಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!