ನಾಳೆ ನಗರಕ್ಕೆ ಜೆ.ಪಿ. ನಡ್ಡಾ ಸಭೆ, ಸಮಾವೇಶದಲ್ಲಿ ಭಾಗಿ

ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಸಂಜೆ ನಗರಕ್ಕೆ ಆಗಮಿಸಲಿದ್ದಾರೆ.
ದಾವಣಗೆರೆ ವಿಭಾಗದ (ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು) ಪ್ರವಾಸ ಕೈಗೊಂಡಿರುವ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಗಳನ್ನು ನಡೆಸಲಿದ್ದು, ವೃತ್ತಿಪರರ ಹಾಗೂ ಪ್ರಭಾವಿ ಮತದಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಜ.5ರ ಗುರುವಾರ ಸಂಜೆ 6 ಗಂಟೆಗೆ ಹೆಬ್ಬಾಳು ಟೋಲ್ ಬಳಿ ಸಾವಿರಾರು ಕಾರ್ಯಕರ್ತರು ನಡ್ಡಾ ಅವರನ್ನು ಸ್ವಾಗತಿಸಲಿದ್ದಾರೆ. 7 ಗಂಟೆಗೆ ಜಿಎಂಐಟಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದ್ದಾರೆ.
ಸಂಜೆಯೇ ಜಿಎಂಐಟಿಯಲ್ಲಿ ನಡ್ಡಾ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಹರಿಹರದಲ್ಲಿನ ಪ್ರಮುಖ ಮಠಗಳಾದ ವಾಲ್ಮೀಕಿ, ಕಾಗಿನೆಲೆ ಹಾಗೂ ಪಂಚಮಸಾಲಿ ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತರ ದಾವಣಗೆರೆಯಲ್ಲಿ ಜ.2ರಿಂದ ಆರಂಭವಾಗಿರುವ ಬೂತ್ ಸಮಿತಿ ಪರಿಶೀಲನೆ ನಡೆಯಲಿದೆ. ವಾರ್ಡ್ ನಂ.10ರಲ್ಲಿನ ಹೊಂಡದ ವೃತ್ತ ಬಳಿಯ ದಾವನ್ ಪೇಟೆಯ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ಭೇಟಿ ನೀಡಲಿದ್ದು, ನಂತರ 10.45ರ ವೇಳೆಗೆ ಸ್ವಕುಳಸಾಳಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
11.30ಕ್ಕೆ ತ್ರಿಶೂಲ್ ಕಲಾಭವನದಲ್ಲಿ ವೃತ್ತಿಪರರ ಹಾಗೂ ಪ್ರಭಾವಿ ಮತದಾರರ ಸಮಾವೇಶ ನಡೆಯಲಿದೆ. ಸುಮಾರು 2 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ನಡ್ಡಾ ಅವರು ಈ ವೇಳೆ ವೃತ್ತಿಪರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ 2023ರ ವಿಧಾನಸಭಾ ಚುನಾವಣೆ ಕುರಿತು ಚಿಂತನ ಮಂಥನ ನಡೆಸಲಿದ್ದಾರೆ ಎಂದು ಹನಗವಾಡಿ ವೀರೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಡಿ.ಎಸ್. ಶಿವಶಂಕರ್, ಮಂಜಾನಾಯ್ಕ, ಶಿವರಾಜ್ ಪಾಟೀಲ್, ಸುಧಾ ಜಯರುದ್ರೇಶ್, ಸೊಕ್ಕೆ ನಾಗರಾಜ್, ಬಿ.ಜಿ.ಸಂಗನಗೌಡ್ರು, ಆನಂದರಾವ್ ಶಿಂಧೆ, ವಿಶ್ವಾಸ್ ಉಪಸ್ಥಿತರಿದ್ದರು.