ಕೆ.ಸಿ. ಕೊಂಡಯ್ಯ ರಿಗೆ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಯಿಂದ ನೋಟಿಸ್.! ಖಾರವಾದ ಉತ್ತರ ನೀಡಿದ ನಿಷ್ಠಾವಂತ

K.C. Notice from Congress Disciplinary Committee to Kondaiah. A loyalist who gave a bitter reply

ಕೆ.ಸಿ. ಕೊಂಡಯ್ಯ ರಿಗೆ ಕಾಂಗ್ರೆಸ್ ಶಿಸ್ತು ಪಾಲನಾ

ಬೆಂಗಳೂರು :ಸೇವಾ ಹಾಗೂ ತ್ಯಾಗ ಮನೋಭಾವ ಉಳ್ಳ ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾದ ನನಗೆ ಈ ದಿವಸ ಕಾರಣವಿಲ್ಲದೆ ಕಾರಣ ಕೇಳಿ ನೋಟೀಸ್ ನೀಡಿರುವುದು ಪ್ರಶ್ನಾರ್ಥಕವೇ ಸರಿ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಕೆಪಿಸಿಸಿಯ ಶಿಸ್ತು ಪಾಲನಾ ಸಮಿತಿ ಸಂಚಾಲಕರಾದ ನಿವೇದಿತ ಆಳ್ವ ಅವರ ನೊಟೀಸ್‌ಗೆ ಖಾರವಾಗಿ ಉತ್ತರಿಸಿದ್ದಾರೆ.
ಕೆ.ಸಿ.ಕೊಂಡಯ್ಯ ಅವರು ಇತ್ತೀಚೆಗೆ ಹೂವಿನಗಡಗಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಶಾಸಕ ಪಿ.ಪಿ.ಪರಮೇಶ್ವರ್ ನಾಯ್ಕ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪರಮೇಶ್ವರ ನಾಯ್ಕ ಅವರು ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ತಮ್ಮ ಸ್ವಂತ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರು ಭ್ರಷ್ಟಾಚಾರ ನಡೆಸಿ ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಂಡಯ್ಯ ಅವರಿಗೆ ಕೆಪಿಸಿಸಿ ಶಿಸ್ತು ಸಮಿತಿಯು ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು
ನೊಟೀಸ್‌ಗೆ ಉತ್ತರಿಸಿ ಪತ್ರ ಬರೆದಿರುವ ಕೊಂಡಯ್ಯ, ಹಡಗಲಿ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಪರಿಹಾರಗಳನ್ನು ಒದಗಿಸದಿರುವ ಬಗ್ಗೆ ಜನರ ಬಾಯಿಗೆ ತುತ್ತಾಗಿರುವುದರಿಂದ ಪಕ್ಷಕ್ಕೆ ಅವರಿಂದ ಆಗಿರುವ ನಷ್ಟ ಮತ್ತು ಕಳಂಕವನ್ನು ಜತೆಗೆ ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ಮುಂಬರುವ ಚುನಾವಣೆಯಲ್ಲಿ ಶಾಸಕರನ್ನು ಬದಲಾವಣೆ ಮಾಡಬೇಕೆನ್ನುವ ಕೂಗು ಇದೆ. ಇದನ್ನು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿರುತ್ತೇನೆ ಹೊರತು ಯಾವುದೇ ವ್ಯಯಕ್ತಿಕ ದ್ವೇಷ ಇದರಲ್ಲಿ ಇಲ್ಲ ಎಂದು ಹೇಳಿದರು.
ನೀವು ಎಐಸಿಸಿ ಸದಸ್ಯರು ಮತ್ತು ಸಂಸತ್ತಿನ ಸದಸ್ಯರನ್ನು ಹೊರತುಪಡಿಸಿ ಇತರ ವ್ಯಕ್ತಿಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ನಾನು ಮಾಜಿ ಸಂಸತ್ ಸದಸ್ಯ ಮತ್ತು ರಾಜ್ಯಸಭಾ ಸದಸ್ಯನಾಗಿರುವುದರಿಂದ ಎಐಸಿಸಿಗೆ ಮಾತ್ರ ಅಧಿಕಾರವಿರುತ್ತದೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.
ಸ್ಥಳೀಯ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ. ಪರಿಹಾರಗಳನ್ನು ಒದಗಿಸದೇ ಇರುವ ಬಗ್ಗೆ ಸ್ಥಳೀಯವಾಗಿ ದೂರುಗಳು ಕಳೆದ 8-10 ತಿಂಗಳುಗಳಿಂದ ನನಗೆ ಕೇಳಿ ಬರುತ್ತಿರುವುದು ನಾನಗೂ ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಮುಜುಗರ ತಂದಿರುತ್ತದೆ. ಈ ಶಾಸಕರು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಬದಲು ತಮ್ಮ ಸಂಬಂಧಿಗಳಿಗೆ ಗುತ್ತಿಗೆಗಳನ್ನು ದೊರಕಿಸಿಕೊಡುವ ಕೆಲಸದಲ್ಲಿ ಮಗ್ನರಾಗಿ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಜನಜನಿತವಾದ ಕಾರಣ ಜನರೇ ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದ ಶಾಸಕರನ್ನು ಬದಲಾವಣೆ ಮಾಡಬೇಕೆಂದು ಮಾಡಿಕೊಂಡಿರುವ ಮನವಿಯನ್ನೇ ತಿಳಿಸಿರುತ್ತೇನೆ.
ನಾನು ಈ ಶಾಸಕರನ್ನು 2008ರಲ್ಲಿ ಹೂವಿನ ಹಡಗಲಿ ಕ್ಷೇತ್ರಕ್ಕೆ ಪರಿಚಯಿಸಿದ ಕಾರಣ, ಕ್ಷೇತ್ರದ ಜನ ನನ್ನಲ್ಲಿ ಈ ಎಲ್ಲ ಪ್ರಶ್ನೆಗಳನ್ನು ಕೇಳಿದ ಸಂದರ್ಭದಲ್ಲಿ ನಾನು ನನ್ನ ಆಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತೇನೆ. ನನ್ನ ಹೇಳಿಕೆಯಲ್ಲಿ ನಾನು ಪಕ್ಷದ ವಿರುದ್ಧವಾಗಲೀ, ಪಕ್ಷದ ನಾಯಕರ ವಿರುದ್ಧವಾಗಲಿ ಒಂದು ಪದ ಬಳಕೆಯನ್ನು ಸಹ ಮಾಡಿರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತವೇನೆಂದರೆ, ಯಾರೇ ನಾಯಕರಾಗಿ ಆಯ್ಕೆಯಾದಂತವರು ಜನರ ಸೇವೆಗೆ ಬದ್ಧರಾಗಿರಬೇಕು. ರಾಜ್ಯದ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು, ಈ ಬಗ್ಗೆ ನಾನು 1996ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಹೋರಾಟ ತಪ್ಪು ಎನ್ನುವುದಾದರೆ ಅದಕ್ಕಿಂತ ದುರಾದೃಷ್ಟ ಮತ್ತೊಂದು ಇರಲಾರದು.
ಯಾವುದೇ ಪಕ್ಷದ ಶಾಸಕರಾಗಲಿ, ಸಂಸದರಾಗಿರಲಿ ಭ್ರಷ್ಟಾಚಾರ, ವ್ಯವಹಾರಗಳನ್ನು ನಡೆಸಿ, ರಾಜ್ಯವನ್ನು ಕೊಳ್ಳೆ ಹೊಡೆಯುವ ಸಂಸ್ಕೃತಿಯನ್ನು ನಾನು ಸಹಿಸುವುದಿಲ್ಲ. ಪಿಟಿ.ಪರಮೇಶ್ವರ ನಾಯಕ್ ಅವರ ಸ್ವಂತ ಮಾವ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಸ್ಕರ್ ನಾಯಕ್ ಮೂಲ ಆದಾಯಕ್ಕಿಂತ, 600 ಒಟ್ಟು ಹೆಚ್ಚು ಆದಾಯವನ್ನು ಗಳಿಸಿದ ಕಾರಣಕ್ಕಾಗಿ ನ್ಯಾಯಾಲಯ ಒಂದು ಕೋಟಿ 25 ಲಕ್ಷ ರೂ ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆಯನ್ನುವಿಧಿಸಿ ತೀರ್ಮಾನ ನೀಡಿದೆ. ಇವರ ಮಾವನ ಆಸ್ತಿಗಳಲ್ಲಿ ಶಾಸಕನ ಆಸ್ತಿಗಳು ಸೇರಿಕೊಂಡಿರುವ ಬಗ್ಗೆ ಬಹಿರಂಗ ಚರ್ಚೆಗೆ ಕಾರಣವಾಗಿದೆ. ಈ ಶಾಸಕರು 1990ರಲ್ಲಿ ಎಂಎಲ್ಎ ಆದಾಗ ಆಸ್ತಿ ಹೊಂದಿದ್ದು, ಪ್ರಸ್ತುತ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ತಿಳಿದುಕೊಳ್ಳುವಂತ ಪ್ರಯತ್ನವನ್ನು ನಮ್ಮ ಪಕ್ಷ ಈರೆಗೂ ನಡೆಸಿಲ್ಲ.
ಕ್ಷೇತ್ರದಲ್ಲಿ ಸತತವಾಗಿ ಇವರಗೆ ಟಿಕೆಟ್ ನೀಡಿದೆ. ಈ ಬಾರಿಯೂ ಅವಕಾಶ ನೀಡುವುದಾದರೆ ಅದಕ್ಕೆ ಕ್ಷೇತ್ರದ ಜನರ ಸಾಕಷ್ಟು ವಿರೋಧವಿರುತ್ತದೆ. ದಯಮಾಡಿ ಪಕ್ಷ ಕ್ಷೇತ್ರದ ವಾಸ್ತವಾಂಶಗಳನ್ನು ಅರಿತುಕೊಂಡು ಅಭ್ಯರ್ಥಿಯನ್ನು ಬದಲಾವಣೆ ಮಾಡುವುದು ಸೂಕ್ತ. ಇಲ್ಲದಿದ್ದಲ್ಲಿ ಇವರನ್ನು ಜನರೇ ಸೋಲಿಸುತ್ತಾರೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದು, ಸಕ್ರೀಯ ರಾಜಕಾರಣದಲ್ಲಿ ಪಕ್ಷದ ಬೆಳವಣಿಗೆಗೆ ಶ್ರಮಿಸುವೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!