ದಾವಣಗೆರೆ: ದಾವಣಗೆರೆ ನಗರದ ಡಿ.ದೇವರಾಜ ಅರಸ್ ಬಡಾವಣೆಯಲ್ಲಿನ ಈಜುಕೊಳದಲ್ಲಿ ಮೇ 19 ರಂದು ತಾಜುದ್ದೀನ್ ಬಿನ್ ನಿಸಾರ್ ಅಹಮದ್ ಮತ್ತು ಮುಬಾರಕ್ ಬಿನ್ ಎಸ್.ಆರ್.ಮುಕ್ತಾಯಾರ್ ಇಬ್ಬರು ಬಾಲಕರು ಮೃತರಾಗಿದ್ದು ಸಂತ್ರಸ್ಥರ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಮೇ 24 ರಂದು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು ಈಗಾಗಲೇ ಘಟನೆ ಸಂಭವಿಸಲು ನಿರ್ಲಕ್ಷ್ಯತೆಯ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದ್ದು ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಹಣದಿಂದ ಪರಿಹಾರದ ಹಣ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು.
