ಕಾರ್ಮಿಕರಿಗೆ ನೀಡುವ ಕಿಟ್ ಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಎಐಟಿಯುಸಿ ಅಧ್ಯಕ್ಷ ಹೆಚ್.ಜಿ. ಉಮೇಶ್
ದಾವಣಗೆರೆ: ಕಾರ್ಮಿಕರಿಗೆ ವಿತರಿಸುತ್ತಿರುವ ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟ್ ಅಪ್ ಕಿಟ್‌ಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಐಟಿಯುಸಿ ಅಧ್ಯಕ್ಷ ಹೆಚ್.ಜಿ. ಉಮೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕೂಡಲೇ ತನಿಖೆಗೆ ಒಳಪಡಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ಸೆ.20 ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಮಂಡಳಿಯಲ್ಲಿರುವುದು ಕಾರ್ಮಿಕರ ಹಣ ಆದರೆ, ಮಂಡಳಿಯಿಂದ ಕರೋನಾ ಲಾಕ್ಡೌನ್ ಅವಧಿಯಲ್ಲೂ ಸಹ ಲಕ್ಷಾಂತರ ಜನ ಕಾರ್ಮಿಕರಿಗೆ ತಲುಪಬೇಕಾದ ಪರಿಹಾರದ ಹಣ ತಲುಪಿಲ್ಲ. ಮತ್ತು ಈಗ ಕೊಡಮಾಡಲಾಗುತ್ತಿರುವ ಟೂಲ್, ಸುರಕ್ಷಾ ಹಾಗೂ ಬೂಸ್ಟ್‌ಅಪ್ ಕಿಟ್‌ಗಳನ್ನು ಅವೈಜ್ಞಾನಿಕವಾಗಿ ವಿತರಣೆ ಮಾಡಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಮಂಡಳಿ ಸಭೆಯಲ್ಲಿ ೨೮ ಲಕ್ಷ ರೂ., ಬೆಲೆಯ ಎರಡು ಇನ್ನೋವ ಕರಿಗೆ ಅನುಮೋದನೆ ಸಿಕ್ಕಿದೆಯಾದರೂ ಸಹ ಏಳು ಇನ್ನೋವ ಕಾರು ಖರೀದಿಸಲಾಗಿದೆ. ೨೦೦ ಕ್ಕೂ ಹೆಚ್ಚು ಟಿವಿ ಮತ್ತು ನೂರಾರು ಕಂಪ್ಯೂಟರ್ ಖರೀದಿ ಮಾಡಲಾಗಿದೆ ಒಟ್ಟಿನಲ್ಲಿ ಹಣ ಬಾಚಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆಪಾದಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಮಂಡಳಿಯ ಹಣ ಬಳಕೆಯಾಗಬೇಕು ಆದ್ದರಿಂದ ಕೂಡಲೇ ಲಾಕ್ಡೌನ್ ಪರಿಹಾರದ ಹಣವನ್ನು ಸಮರ್ಪಕವಾಗಿ ಎಲ್ಲಾ ಕಾರ್ಮಿಕರ ಖಾತೆಗೂ ಹಣ ವರ್ಗಾವಣೆ ಮಾಡಬೇಕು, ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರಿಗೆ ೨ ಲಕ್ಷ ರೂ., ಪರಿಹಾರ ಮೊತ್ತ ಕೂಡಲೇ ಜಾರಿ ಮಾಡಬೇಕು, ಬೋಗಸ್ ಕಾಂಇಕ ಕಾರ್ಡುಗಳನ್ನು ಕೂಡಲೇ ರದ್ಧು ಮಾಡಿ, ಇದಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸಿ ಸೆ.೨೦ ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಹೋರಾಟದಲ್ಲಿ ಪಾಲ್ಗೊಳ್ಳುವ ಕಾರ್ಮಿಕರು ರೊಟ್ಟಿ-ಬುತ್ತಿ, ಹೊದಿಕೆಯನ್ನು ಖಡ್ಡಾಯವಾಗಿ ನಿಮ್ಮೊಂದಿಗೆ ತರಬೇಕು ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಕುಕ್ಕುವಾಡ ಮಂಜುನಾಥ್, ಆನಂದರಾಜ್, ಎ. ಗುಡ್ಡಪ್ಪ, ಸತೀಶ್ ಅರವಿಂದ್ದ, ವಿ. ಲಕ್ಷ್ಮಣ್, ಆದಿಲ್ ಖಾನ್, ತಿಮ್ಮಪ್ಪ ಇದ್ದರು.