ಎಸ್‌ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಜಾರಿಗೆ ಕರ್ನಾಟಕ ನಾಯಕರ ಒಕ್ಕೂಟ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಒತ್ತಾಯ
ದಾವಣಗೆರೆ : ನ್ಯಾ. ಸುಭಾಷ್ ಅಡಿ ನೇತೃತ್ವದ ತ್ರಿಸದಸ್ಯ ಸಮಿತಿಯಿಂದ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ವಿಚಾರವನ್ನು ಹೊರಗಿಟ್ಟು, ವಾಲ್ಮೀಕಿ ಸಮುದಾಯ ಸೇರಿದಂತೆ ಇಡೀ ಎಸ್‌ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸೋಮವಾರ ಚರ್ಚೆ ನಡೆಸಿ ಒತ್ತಡ ಹೇರಲಾಯಿತು ಎಂದು ಕರ್ನಾಟಕ ನಾಯಕರ ಒಕ್ಕೂಟ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.
ತಮ್ಮ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಅವರು ಅದಕ್ಕೊಂದು ಸೂತ್ರ ರಚಿಸಿ ಜಾರಿ ಮಾಡುವ ಭರವಸೆ ನೀಡಿದ್ದಾರೆ. ಜೊತೆಗೆ ಭೇಟಿಯ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಜೊತೆಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಒಂದು ವೇಳೆ ನಾಯಕ ಸಮುದಾಯದ ಈ ಬೇಡಿಕೆ ಈಡೇರದೆ ಹೋದರೆ ನಿಶ್ಚಿತವಾಗಿ ಮುಂದಿನ ದಿನಗಳಲ್ಲಿ ಹೊಸ ಸ್ವರೂಪದ ಹೋರಾಟ ಶತಸಿದ್ಧ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.