ಕರ್ನಾಟಕ ವಿಧಾನಮಂಡಲ 70 ವರ್ಷಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದೆ : ಸಿಎಂ ಬೊಮ್ಮಾಯಿ

ಬೆಳಗಾವಿ: ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಭೂ ಸುಧಾರಣೆ ಕಾಯ್ದೆಗಳು, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಿನ್ನೆ ‘ಸದನ ಶೂರರು- ಕಾಫಿ ಟೇಬಲ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿ, ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಬೇರೆ ರಾಜ್ಯಗಳಲ್ಲಿ ಇಂತಹ ಮಸೂದೆಗಳ ಚರ್ಚೆಯೂ ನಡೆದಿರಲಿಲ್ಲ. ಕರ್ನಾಟಕ ಪ್ರಗತಿಪರವಾದ ರಾಜ್ಯವಾದ್ದರಿಂದ ಪ್ರಮುಖ ಮಸೂದೆಗಳು ಬಂದವು. ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ನಂತರ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗೆ ನಾಂದಿಯಾಯಿತು ಎಂದರು. ಈ ರೀತಿ ಕರ್ನಾಟಕದ ವಿಧಾನಮಂಡಲ ಹತ್ತು ಹಲವು ಪ್ರಥಮಗಳನ್ನು ದಾಖಲಿಸಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಮಂಡಲ 70 ವರ್ಷಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದ್ದು, ಅದಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಮ್ಮ ಹಿರಿಯರು ನಡೆದು ಬಂದ ದಾರಿಯಲ್ಲಿ ನಡೆದು, ಅವರ ಆದರ್ಶಗಳ ಹಾದಿಯಲ್ಲಿ ನಡೆಯಲು ಕಾಫಿ ಟೇಬಲ್ ಪುಸ್ತಕ ಸ್ಪೂರ್ತಿ ನೀಡಲಿದೆ ಎಂದು ಹೇಳಿದರು. ಒಂದು ಪತ್ರಿಕೆ 70 ವರ್ಷದ ವಿಧಾನಮಂಡಲದ ವಿಷಯಗಳನ್ನಾಧರಿಸಿ ಕಾಫಿ ಟೇಬಲ್ ಪುಸ್ತಕ ಮಾಡಿರುವುದು ಇದೇ ಪ್ರಥಮ ಎನಿಸುತ್ತದೆ. ಸಂಸದೀಯ ವ್ಯವಹಾರಗಳ ಇಲಾಖೆಗಳಿಂದ ಇಂತಹ ಪುಸ್ತಕಗಳನ್ನು ಹೊರತರುತ್ತೇವೆ. ಇಂದು ನಾವು ಆದರ್ಶ ಶಾಸಕರು ಎಂದು ಆರ್.ವಿ.ದೇಶಪಾಂಡೆಯವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ನಾಲ್ಕನೇ ಸ್ತಂಭವೆನ್ನಲಾಗುವ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕಾರಣಿಗಳ ನಿಲುವುಗಳನ್ನು ಜನಪರವನ್ನಾಗಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ರಾಜಕಾರಣಿಗಳು ತಮ್ಮ ಭವಿಷ್ಯವನ್ನು ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುತ್ತಿರುವುದು ಪತ್ರಿಕೆಗಳು ಎಂದು ಬೊಮ್ಮಾಯಿ ತಿಳಿಸಿದರು.