ಕೃಷ್ಣಾ ಮೇಲ್ದಂಡೆ ಯೋಜನೆ: ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆಗೆ ಮೋಸ?

ಹುಬ್ಬಳ್ಳಿ: ಕೃಷ್ಣಾ ಮೇಲ್ದಂಡೆ ಯೋಜನೆ: ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆಗೆ ನಿರಂತರ ಮೋಸವಾಗುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರಿಗೆ ಈಗ ಸಂಘರ್ಷದ ಕಾಲವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ 130 ಟಿಎಂಸಿ ನೀರಿನ ಪ್ರತಿ ಹನಿಯ ಬಳಕೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಕಳೆದ 8 ವರ್ಷಗಳಿಂದ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡುತ್ತಾ ಬಂದಿದೆ. ಇದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೋರಾಡಲು ಸನ್ನದ್ಧರಾಗಿದ್ದಾರೆ. ಮುಂದಿನ ಮೂರು ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕೃಷ್ಣಾ ನದಿ ನೀರಿನ ಯೋಜನೆಯ ಮೊದಲ ಹಾಗೂ ಎರಡನೇ ಹಂತವನ್ನು ಕಾಂಗ್ರೆಸ್ ಸರ್ಕಾರಗಳೇ ಮಾಡಿದ್ದು, ಮೂರನೇ ಹಂತದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ಮಾಡಲಿದೆ. ಇದರಿಂದ 130 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗಲಿದ್ದು, 6 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ ಎಂದರು.
ಕಳೆದ 8 ವರ್ಷಗಳಿಂದ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಈ ಯೋಜನೆಗೆ ತಡೆ ಹಿಡಿದಿದೆ. ಮುಂದೆ ಬರುವ ಕಾಂಗ್ರೆಸ್ ಸರ್ಕಾರ ಕೃಷ್ಣಾ ಯೋಜನೆ ಜಾರಿಗೆ ಪ್ರತಿ ವರ್ಷ ಬಜೆಟ್ ಅನುದಾನದಲ್ಲಿ 40 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಮೀಸಲಿಡಲಿದೆ. ಈ ಯೋಜನೆ ಜಾರಿ ವಿಚಾರವಾಗಿ ಇಂದು ವಿಜಯಪುರದಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.
ಅಮಿತ್ ಶಾ ಅವರು ಕೂಡ ರಾಜ್ಯ ಪ್ರವಾಸ ಮಾಡಿದ್ದು, ಅವರು ಕೃಷ್ಣಾ ನದಿ ವಿಚಾರವಾಗಿ ನಿಮ್ಮ ಜತೆ ಮಾತನಾಡುವುದಿಲ್ಲ. ಮಹದಾಯಿ ನದಿ ವಿಚಾರವಾಗಿ ಮಾತನಾಡುವುದಿಲ್ಲ. ಕಾರಣ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯದ ಜನರಿಗೆ ಈ ಎರಡು ನದಿಗಳಿಂದ ಸಿಗಬೇಕಾದ ನೀರನ್ನು ವಂಚಿಸಿದ್ದಾರೆ. ಈ ಕಾರಣಕ್ಕೆ ಅವರು ಮಾತನಾಡುವುದಿಲ್ಲ. ಅವರ ಜತೆ ನಿಂತಿರುವವರು ಕೂಡ ಈ ಭಾಗದ ಜನರಿಗೆ ಕೃಷ್ಣಾ ಹಾಗೂ ಮಹಾದಾಯಿ ನೀರು ಸಿಗದಂತೆ ಮಾಡಿದ್ದಾರೆ. ಮೂರು ತಿಂಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆಯಲಾಗುವುದು ಎಂದರು.
ಮಹದಾಯಿ ಹಾಗೂ ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಬಿಜೆಪಿ ಕಳೆದ 8 ವರ್ಷಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಜ.2ರಂದು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಮಹದಾಯಿ ನೀರಾವರಿ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಪರಿಣಾಮವಾಗಿ ಬಿಜೆಪಿ ಸರ್ಕಾರ ಜನರ ಮೂಗಿಗೆ ತುಪ್ಪ ಸವರುವಂತೆ ಡಿಪಿಆರ್ ಗೆ ಅನುಮೋದನೆ ನೀಡಿದೆ. ಮಹದಾಯಿ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆ ಅನುಮತಿ ಪತ್ರ ಎಲ್ಲಿದೆ? ಪರಿಸರ ಇಲಾಖೆ ಅನುಮತಿ ಪತ್ರ ಎಲ್ಲಿದೆ? ಈ ಯೋಜನೆಗೆ ಸಂಬಂಧಿಸಿದ ಟೆಂಡರ್ ಎಲ್ಲಿ ಕರೆದಿದ್ದಾರೆ? ಕಳೆದ 8 ವರ್ಷಗಳಿಂದ ಇದ್ಯಾವುದನ್ನೂ ಮಾಡದವರು ಈಗ ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಈ ವಿಚಾರವಾಗಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದ ಸುರ್ಜೀವಾಲ, ಮಹದಾಯಿ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ 3 ಸಾವಿರ ಕೋಟಿ ಅನುದಾನವನ್ನು ನೀಡಲಿದ್ದು, ಮೊದಲ ಸಂಪುಟ ಸಭೆಯಲ್ಲಿ 500 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಇದು ಮಹದಾಯಿ ಯೋಜನೆ ಜಾರಿ ಮಾಡುವ ವಿಧಾನ. ಜನರು ಮೋಸಗಾರರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.