ನ್ಯಾಯಸಮ್ಮತ ಚುನಾವಣೆ ನಡೆಸಲು ಕೆಆರ್‌ಎಸ್ ಪಕ್ಷದಿಂದ ಡಿಸಿಗೆ ಮನವಿ

ನ್ಯಾಯಸಮ್ಮತ ಚುನಾವಣೆ
ದಾವಣಗೆರೆ: ಚುನಾವಣಾ ಅಕ್ರಮಗಳನ್ನು ನಿಲ್ಲಿಸಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ಆಗ್ರಹ ಪತ್ರ ನೀಡಲಾಯಿತು.
ಇದೇ ವೇಳೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಶೀಘ್ರದಲ್ಲಿ ಬರಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣಿಗಳು ತಮ್ಮ ಕ್ಷೇತ್ರದ ಮತದಾರರಿಗೆ ಹಣ, ಬೆಲೆಬಾಳುವ ವಸ್ತುಗಳು ಮತ್ತು ಲಿಕ್ಕರ್ ಹಂಚುವ ಮೂಲಕ ಆಮಿಷವೊಡ್ಡಿ ಮತಗಳನ್ನು ಕೊಂಡುಕೊಳ್ಳಲು ನೋಡುತ್ತಿದ್ದು, ಆಮಿಷ ಒಡ್ಡುವ ಇಂಥ ಕ್ರಿಮಿನಲ್ ನಡವಳಿಕೆಯ ರಾಜಕಾರಣಿಗಳಿಗೆ ಕಡಿವಾಣ ಹಾಕಬೇಕು ಮತ್ತು ಇಂಥ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಮಾಡುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಚುನಾವಣಾ ಅಕ್ರಮಗಳನ್ನು ಮಾಡುತ್ತಿರುವ ಮತ್ತು ಆಮಿಷವೊಡ್ಡುತ್ತಿರುವ ಕಡುಭ್ರಷ್ಟ ರಾಜಕಾರಣಿಗಳನ್ನು ಪ್ರಶ್ನೆ ಮಾಡುವ ಕೆಲಸ ಮಾಡಬೇಕಾಗುತ್ತದೆ. ಹಾಗಾಗದಂತೆ ಜಿಲ್ಲಾಡಳಿತವೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲಾ ಅಕ್ರಮಗಳು ನಿಲ್ಲುವಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ರಘು ಜಾಣಗೆರೆ, ದಾವಣಗೆರೆ ಜಿಲ್ಲಾಧ್ಯಕ್ಷ ಸುರೇಶ್ ಸಂಗಹಳ್ಳಿ, ಯುವ ಘಟಕದ ಜಿಲ್ಲಾಧ್ಯಕ್ಷ ಅಭಿಷೇಕ್, ಪಕ್ಷದ ಮಾಯಕೊಂಡ ಅಭ್ಯರ್ಥಿ ಸೋಮಶೇಖರ್, ಜಗಳೂರು ಅಭ್ಯರ್ಥಿ ಮಂಜುನಾಥ ಗೌಡ, ಜಿಲ್ಲಾ ಕಾರ್ಯದರ್ಶಿ ವೀರಭದ್ರಪ್ಪ, ಮಾಲತೇಶ್, ಗುಡ್ಡಪ್ಪ, ಶ್ರೀಧರ್, ಅಜ್ಜೇಶ್ ಮತ್ತಿತರ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳು ಭಾಗವಹಿಸಿದ್ದರು.