ಜನ ವಸತಿ ಪ್ರದೇಶದಲ್ಲಿ ನಕಲಿ ಪರವಾನಿಗೆ ಸೃಷ್ಠಿಸಿಕೊಂಡು ವಾಹನಗಳ ವಾಟರ್ ಸರ್ವಿಸ್ ಸ್ಟೇಷನ್ ನಿರ್ಮಾಣ – ಕ್ರಮಕ್ಕೆ ಆಗ್ರಹಿಸಿದ ಕೆ ಆರ್ ಎಸ್ ಪಕ್ಷ
ದಾವಣಗೆರೆ: ನಗರದ ಶಿವಕುಮಾರಸ್ವಾಮಿ ಬಡಾವಣೆಯ ಜನ ವಸತಿ ಪ್ರದೇಶದಲ್ಲಿ ನಕಲಿ ಪರವಾನಿಗೆ ಸೃಷ್ಠಿಸಿಕೊಂಡು ವಾಹನಗಳ ವಾಟರ್ ಸರ್ವಿಸ್ ಸ್ಟೇಷನ್ ನಿರ್ಮಾಣ ಮಾಡಿಕೊಂಡಿದ್ದು, ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ, ಕೂಡಲೇ ತೆರವುಗೊಳಿಸಲು ಪಾಲಿಕೆ ಕ್ರಮ ವಹಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪಕ್ಷದ ಯುವ ಘಟಕದ ಅಧ್ಯಕ್ಷ ಜಿ. ಮಹಾಂತೇಶ್ ಮಾತನಾಡಿ, ಆ ಜಾಗ ಪಾಲಿಕೆಗೆ ಸೇರಿದ್ದು, ಅಕ್ರಮವಾಗಿ ಬಫರ್‌ಜೋನ್ ಇರುವೆಡೆ ವಾಹನಗಳ ವಾಟರ್ ಸರ್ವಿಸ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯುಂಟಾಗಿದೆ. ಪಾಲಿಕೆಗೆ ಹಲವಾರು ಬಾರಿ ತೆರವುಗೊಳಿಸಲು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರು ತೆರವುಗೊಳಿಸಲು ಒಂದು ವರ್ಷದ ಹಿಂದೆಯೇ ನೋಟಿಸ್ ಕಳಿಸಿದ್ದಾರೆ. ಆದರೂ ಸರ್ವಿಸ್ ಸ್ಟೇಷನ್ ತೆರವು ಮಾಡಿಲ್ಲ. ಪಾಲಿಕೆ ಮೇಯರ್‌ಗೆ ಕೇಳಿದರೆ ಅವರು ಮಾನವೀಯತೆ ದೃಷ್ಠಿಯಿಂದ ಸುಮ್ಮನಾಗಿದ್ದೇವೆ ಎನ್ನುತ್ತಾರೆ. ಮೇಲ್ನೋಟಕ್ಕೆ ಪಾಲಿಕೆ ಅಧಿಕಾರಿಗಳು, ಮೇಯರ್ ಇದರಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆ ಹದಿನೈದು ದಿನಗಳ ಒಳಗಾಗಿ ಕ್ರಮ ವಹಿಸದಿದ್ದರೆ ಪಾಲಿಕೆ ಮುಂಭಾಗ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಂ.ಎಸ್. ರಾಜು, ಅಭಿಷೇಕ್, ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ ಪರಮೇಶ್ವರಪ್ಪ ಇದ್ದರು.