ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಏ.10 ರಂದು ಮನಿ ಸೀಕ್ರೆಟ್ಸ್ – ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಬಿಡುಗಡೆ

ಬೆಂಗಳೂರು :ಹಿರಿಯ ಪತ್ರಕರ್ತ ಶರತ್ ಎಂ.ಎಸ್. ಬರೆದಿರುವ, ಬಹುರೂಪಿ ಹೊರತಂದಿರುವ ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಏಪ್ರಿಲ್ 10 , ಸೋಮವಾರದಂದು ಲೋಕಾರ್ಪಣೆಗೊಳ್ಳಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಜಂಟಿಯಾಗಿ ಈ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿವೆ. ಏಪ್ರಿಲ್ 10 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆ.ಜಿ. ರಸ್ತೆಯ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿರುವ ಶಿವಾನಂದ ತಗಡೂರು ಅವರು ಈ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದಾರೆ.
ಹಿರಿಯ ಪತ್ರಕರ್ತರು ವಿಸ್ತಾರ ನ್ಯೂಸ್ ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮನಿ ಸೀಕ್ರೆಟ್ಸ್ – ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ ಮತ್ತು ಫ್ರೀಡಂ ಆಪ್ ನ ಸಿಇಒ ಹಾಗೂ ಸಂಸ್ಥಾಪಕರಾದ ಸಿ.ಎಸ್. ಸುಧೀರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪುಸ್ತಕದ ಬಗ್ಗೆ: ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಜಂಟಿ ಪುಸ್ತಕವಾಗಿದ್ದು ಒಂದು ಕಡೆಯಿಂದ ಹಣಕಾಸು ನಿರ್ವಹಣೆಯ ಬಗ್ಗೆ ಬರೆಯಲಾಗಿದೆ, ಮತ್ತೊಂದು ಭಾಗದಿಂದ ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿಸಿಕೊಡಲಾಗಿದೆ.ಅತ್ಯಂತ ಸರಳವಾಗಿ ಈ ಪುಸ್ತಕವನ್ನು ರೂಪಿಸಲಾಗಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಅವರ ಪ್ರಕಾಶನ ಸಂಸ್ಥೆ ಬಹುರೂಪಿ ಇದನ್ನು ಹೊರತಂದಿದ್ದು ರಾಜ್ಯದ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಲೇಖಕರ ಬಗ್ಗೆ: ಆಂದೋಲನ, ಕಸ್ತೂರಿ ಟಿವಿ, ಟಿವಿ 9, ಸಮಯ ಟಿವಿ, ವಿಜಯ ವಾಣಿ, ನ್ಯೂಸ್ 18, ದಿಗ್ವಿಜಯ ಟಿವಿ ಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಶರತ್. ಎಂ. ಎಸ್. ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಶರತ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂದರೆ 30ನೇ ವಯಸ್ಸಿನಲ್ಲೇ ದಿಗ್ವಿಜಯ ಟಿವಿ ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು.
ಸದ್ಯ ವಿಸ್ತಾರ ನ್ಯೂಸ್ ನ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಅವರು ವೈಯಕ್ತಿಕ ಹಣಕಾಸು ನಿರ್ವಹಣೆ ಸಂಸ್ಥೆ ಇಂಡಿಯನ್ ಮನಿಯಲ್ಲಿ ಸುಮಾರು ನಾಲ್ಕೂವರೆ ವರ್ಷ ಕಂಟೆಂಟ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಷೇರು ಮಾತು ಅಂಕಣ ಜನಪ್ರೀಯತೆ ತಂದುಕೊಟ್ಟಿತ್ತು. ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮನಿ ಸೀಕ್ರೆಟ್ಸ್ – ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಸಹ ಅಷ್ಟೇ ಹೆಸರು ಗಳಿಸಿದೆ. ಮೈಸೂರಿನಲ್ಲಿ ಎಂ.ಎ. ಪದವಿ ಪೂರೈಸಿರುವ ಶರತ್ ಚಾಮರಾಜನರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಗ್ರಾಮದವರು.