ಕಸಾಪ ರಾಜ್ಯಾದ್ಯಕ್ಷ ಸ್ಥಾನಕ್ಕೆ ಮಾಯಣ್ಣ ರಿಗೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಬೆಂಬಲ
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ರಾಜ್ಯಾಧ್ಯಕ್ಷರಾಗಿ ಸ್ಪರ್ಧಿಸುತ್ತಿರುವ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ, ಅನಿಕೇತನ ಕನ್ನಡ ಬಳಗದ ಹಾಗೂ ಬಿಬಿಎಂಪಿ ಅಧಿಕಾರಿ-ನೌಕರರ ಸಂಘದ ಅಧ್ಯಕ್ಷರಾಗಿರುವ ಮಾಯಣ್ಣ ಅವರಿಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಬೆಂಬಲಿಸಿದ್ದಾರೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿಗೂ ನನಗೂ ಅವಿನಾಭಾವ ಸಂಬಂಧವಿದೆ. ಆಗ ಪರಿಷತ್ತಿಗೆ ಯಾವ ಅನುದಾನವೂ ಬರುತ್ತಿರಲಿಲ್ಲ. ನಾನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವೆಯಾದ ಮೇಲೆ ಕಸಾಪಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ದೊಡ್ಡಶಕ್ತಿ ತುಂಬಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನಗಳಾಗಿ. ಕನ್ನಡ ಸಾಹಿತ್ಯ ಬೆಳಗಬೇಕೆಂದು ಶ್ರಮವಹಿಸಿದ್ದಾಗಿ ಅವರು ನೆನಪಿಸಿಕೊಂಡ ಅವರು, ಕನ್ನಡ ಉಳಿಸಿ ಬೆಳೆಸಲು ಇದೇ ರೀತಿ ಮಾಯಣ್ಣ ಅವರು ಶ್ರಮಿಸುವ ವಿಶ್ವಾಸವಿದೆ ಎಂದರು.
ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮಾಯಣ್ಣನವರು ಕನ್ನಡ ಹೋರಾಟಗಾರರು. ಕನ್ನಡ ಪುಸ್ತಕವನ್ನು ಮನೆಮನೆಗೆ ಹಂಚಿ, ಬೆಂಗಳೂರಿನ ೨೮ ಬಡಾವಣೆಗಳಲ್ಲಿ ಕನ್ನಡ ಬೆಳೆಸಿ-ಉಳಿಸಿದ್ದಾರೆ. ಮೆಟ್ರೋ ಬಂದ ಮೊದಲ ದಿನವೇ ಅದನ್ನು ತಡೆಹಾಕಿ, ಕನ್ನಡ ಬೋರ್ಡ್ ಹಾಕಿಲ್ಲದ ಕಾರಣ ಹೋರಾಟ ನಡೆಸಿದ್ದರು. ಇಂತಹ ಕನ್ನಡ ಉಳಿಸುವವರು ಕಸಾಪಕ್ಕೆ ಬೇಕಿದೆ ಎಂದು ಅಭಿಪ್ರಾಯಿಸಿದರು.
ಕರ್ನಾಟಕದಲ್ಲಿ ಬದುಕಬೇಕಾದರೆ ಕನ್ನಡ ಖಡ್ಡಾಯವಾಗಬೇಕು, ಆಡಳಿತ ಭಾಷೆಯಾಗಬೇಕು, ಕನ್ನಡದಲ್ಲಿ ವ್ಯವಹಾರ ನಡೆಸಬೇಕು ಎಂಬುದೆ ನನ್ನ ಒತ್ತಾಯವಾಗಿದ್ದು, ಮಾಯಣ್ಣ ಅಂತಹವರು ಆ ಪ್ರಯತ್ನ ನಡೆಸುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ದಾವಣಗೆರೆ ಜಿಲ್ಲೆಯ ಜನತೆ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸ್ಪರ್ಧಾಕಾಂಕ್ಷಿ ಮಾಯಣ್ಣ ಮಾತನಾಡಿ, ತಾವು ಕನ್ನಡಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಿದ್ದು, ಈಗ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ರಾಜ್ಯಾಧ್ಯಕ್ಷನಾಗಿ ಗೆಲುವು ಸಾಧಿಸಿದರೆ ಮನೆಮನಗಳಲ್ಲೂ ಕನ್ನಡ ಬೆಳಗುವಂತೆ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲ ಬೇಕೆಂದು ವಿನಂತಿಸಿದರು.
ತಾವು ಕಸಾಪಕ್ಕೆ ಹೊಸ ಬಗೆಯಲ್ಲಿ ಕಾಯಕಲ್ಪ ನೀಡುವ ಹೆಬ್ಬಯಕೆ ಹೊಂದಿದ್ದು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತನ್ನು ಕನ್ನಡಿಗರ ಶಕ್ತಿ ಕೇಂದ್ರವಾಗಿಸುತ್ತೇನೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ಕೋಟಿ ರೂ., ಗಡಿನಾಡು ಸಮ್ಮೇಳನಗಳಿಗೆ ತಲಾ ೧೦ ಲಕ್ಷ ರೂ., ರಾಜ್ಯದ ಎಲ್ಲಾ ತಾಲ್ಲೂಕು, ಬಿಬಿಎಂಪಿ, ವಿಧಾನಸಭಾ ಕ್ಷೇತ್ರಗಳ ನುಡಿಜಾತ್ರೆಗೆ ತಲಾ ೨ ಲಕ್ಷ ಹಾಗೂ ನಾಡಿನ ಎಲ್ಲಾ ಹೋಬಳಿ, ಪಾಲಿಕೆ, ಬಿಬಿಎಂಪಿ ವಾರ್ಡ್‌ಗಳ ಮಟ್ಟದ ಸಮ್ಮೇಳನಕ್ಕೆ ತಲಾ ೧ ಲಕ್ಷ ಅನುದಾನ ಒದಗಿಸುವಿಕೆ ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೇ, ಕಾಸಪ ಹೊರತುತ್ತಿರುವ ಕನ್ನಡ ನುಡಿ ಮಾಸಪತ್ರಿಕೆಯನ್ನು ಮತ್ತಷ್ಟು ಚೆಂದಗಾಣಿಸಿ, ಸರ್ವ ಸದಸ್ಯರಿಗೂ ರವಾನೆ ಮಾಡಲಾಗುವುದು, ಖಾಗಿ ಜಾಹೀರಾತುಗಳಿಂದ ಪತ್ರಿಕೆಗೆ ಆರ್ಥಿಕ ಬಲ ತಂದುಕೊಡಲಾಗುವುದು, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ಕಸಾಪದಿಂದ ಸುಸಜ್ಜಿತವಾದ ಪುಸ್ತಕ ಮಳಿಗೆ ಸ್ಥಾಪಿಸುವುದು ಹಾಗೂ ರಾಷ್ಟ್ರೀಯ ಕನ್ನಡ ಪೀಠ ಪ್ರಶಸ್ತಿ ವ್ಯವಸ್ಥೆ ಮಾಡುವುದು ಸೇರಿದಂತೆ ಕನ್ನಡ ಅಭ್ಯುದಯಕ್ಕೆ ಶ್ರಮಿಸುವುದಾಗಿ ಹೇಳಿದರು.