ಗಾಜಿನ ಮನೆಯಲ್ಲಿ ಮತದಾನ ಜಾಗೃತಿ ಚಿತ್ರಸಂತೆ
ದಾವಣಗೆರೆ : ಗಾಜಿನ ಮನೆಯಲ್ಲಿ ವೈಟ್ ಬೋರ್ಡ್ ಮೇಲೆ ಸಹಿ ಹಾಕುವ ಮೂಲಕ ಚಿತ್ರ ಸಂತೆ ಹಾಗೂ ಮತದಾನ ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಸ್ವೀಪ್ ನೋಡಲ್ ಪಿ.ಎಸ್.ವಸ್ತ್ರದ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಗಾಜಿನ ಮನೆಯಲ್ಲಿ ಆಯೋಜಿಸಿದ ಮತದಾನ ಜಾಗೃತಿ, ಚಿತ್ರ ಸಂತೆ ಸಹಿ ಸಂಗ್ರಹ ಅಭಿಯಾನ ಹಾಗೂ ಸೆಲ್ಫಿ ಕಾರ್ನರ್ ಮೂಲಕ ಮತದಾನ ಹಾಗೂ ಚುನಾವಣೆ ಪ್ರಕ್ರಿಯೆ ಕುರಿತಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಫೈನ್ ಆಟ್ಸ್ ಕಾಲೇಜಿನ ವಿದ್ಯಾರ್ಥಿಗಳು, ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘದ ಕಲಾವಿದರು ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಾಜಿನ ಮನೆಯ ಆವರಣದಲ್ಲಿ ಮತದಾನ ಜಾಗೃತಿ ಕುರಿತಾಗಿ ಬಹು ವರ್ಣದ ವೈವಿಧ್ಯಮ ಮತದಾನ ಜಾಗೃತಿ ಸಂದೇಶಗಳನ್ನು ಭಿತ್ತರಿಸುವ ಚಿತ್ರಗಳು ಎಲ್ಲರ ಗಮನ ಸೆಳೆದವು.
ಉತ್ತಮ ನಾಯಕನ ಆಯ್ಕೆ ನಮ್ಮೆಲ್ಲರ ಜವಾಬ್ದಾರಿ, ಪ್ರತಿ ಭಾರತೀಯನ ಮತದಾನ ಸರ್ವ ಶ್ರೇಷ್ಠ, ನಿಮ್ಮ ಮತ ನಿಮ್ಮ ಹಕ್ಕು , ನಿಮ್ಮ ಮತ ಚಲಾಯಿಸಿ, ಕರ್ನಾಟಕ ಗೆಲ್ಲಿಸಿ, ದಾನಗಳಲ್ಲಿ ಶ್ರೇಷ್ಠ ದಾನ ಪವಿತ್ರ ಮತದಾನ ಎಂಬ ಘೋಷ ವಾಕ್ಯಗಳು ಒಳಗೊಂಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಿತ್ರಸಂತೆಯಲ್ಲಿ ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ನಾಗರಾಜ್, ನಿಟ್ಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಗನ್. ವಿ , ಕಾಶಿಪುರ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಾಜು, ಹೂವಿನಮಡು ಜಿ.ಹೆಚ್.ಎಸ್ ಸರ್ಕಾರಿ ಪ್ರೌಢ ಶಾಲೆಯ ಹನುಮಂತಪ್ಪ, ಯಕ್ಕನಹಳ್ಳಿ ಶ್ರೀ ಬೀರಲಿಂಗೇಶ್ವರ ಪ್ರೌಢ ಶಾಲೆಯ ತಿಪ್ಪೇಸ್ವಾಮಿ, ಡಿ.ಆರ್‍ಎಂ. ಪದವಿ ಪೂರ್ವ ಕಾಲೇಜಿನ ಸಂಗೀತ.ಎನ್, ಪೂಜಾ, ಸೌಂದರ್ಯ, ಕಾವ್ಯ, ಬೆಳಲಗೆರೆ ಸರ್ಕಾರಿ ಪ್ರೌಢ ಶಾಲೆಯ ಪುಂಡಲೀಕ ಎಂ.ಕೆ ಅವರು ಕಲೆಗಳನ್ನು ಪ್ರದರ್ಶಿಸಿದರು.
ಅಭಿಯಾನದಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಹಿಟ್ನಾಳ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.