ತಹಶೀಲ್ದಾರ್ ಮನೆಗೆ ಲೋಕಾಯುಕ್ತ: ಕಂತೆ ಕಂತೆ ನೋಟು, ಚಿನ್ನ ಪತ್ತೆ.!

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಮಂಗಳೂರು ಮೂಲದ ತಹಸೀಲ್ದಾರ್ ಅಜೀತ್ ರಾಜ್ ರೈ ಮನೆ ಮತ್ತು ಕಚೇರಿ ಸೇರಿದಂತೆ ಹತ್ತು ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದ್ದು. ಬೆಂಗಳೂರಿನ ಸಹಕಾರನಗರ ಮನೆಯಲ್ಲಿ ಕಂತೆ ಕಂತೆ ಹಣ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು ಪೂರ್ವದ ಕೃಷ್ಣರಾಜಪುರ ತಹಶೀಲ್ದಾರ್ ಅಜೀತ್ ರಾಜ್ ವಿರುದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಈ ಹಿಂದೆ ಅಜಿತ್ ರಾಜ್ ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರೇಡ್-2 ತಹಶಿಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರು ನಗರ ಜಿಲ್ಲೆ ಕೃಷ್ಣರಾಜಪುರದ ತಹಶಿಲ್ದಾರರಾಗಿದ್ದರು ಅಜಿತ್ ರಾಜ್ ರೈ.
ಕೆಲವು ದಿನಗಳ ಹಿಂದೆ ಕೃಷ್ಣರಾಜಪುರ ತಹಶಿಲ್ದಾರರಾಗಿದ್ದ ವೇಳೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಮಾನತು ಕೂಡ ಆಗಿದ್ದರು. ಅಮಾನತನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಅಜಿತ್ ರೈ ಕೋರ್ಟ್ ನಿಂದ ಆದೇಶ ತಂದು ಮತ್ತೆ ಕೃಷ್ಣರಾಜಪುರ ತಹಶಿಲ್ದಾರರಾಗಿ ವಾಪಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಇದೀಗ ಆದಾಯ ಕ್ಕೂ ಹೆಚ್ಚು ಅಕ್ರಮ ಆಸ್ತಿ ಆರೋಪ ಹಿನ್ನಲೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ನಗದು, ಚಿನ್ನ, ಐಷಾರಾಮಿ ಕಾರು, ಜಮೀನುಗಳ ದಾಖಲೆ ಪತ್ತೆಯಾಗಿದೆ ಎನ್ನಲಾಗಿದ್ದು ಶೋಧನೆ ಕಾರ್ಯ ಮುಂದುವರೆಸಿದ್ದಾರೆ ಲೋಕಾಯುಕ್ತ ಪೊಲೀಸರು.