ಶಾಸಕ ಮಾಡಾಳು ಪುತ್ರನ ಬಂಧನ ನೋಟಿನ ಕಂತೆ ತುಂಬಿದ 3 ಬ್ಯಾಗ್ ವಶಕ್ಕೆ ಪಡೆದ ಲೋಕಾಯುಕ್ತರು
ಬೆಂಗಳೂರು : ಕೆಎಸ್ ಡಿಎಲ್‌ಗೆ ರಾಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕ್ರೆಸಂಟ್ ರಸ್ತೆಯಲ್ಲಿನ ಶಾಸಕರ ಖಾಸಗಿ ಕಚೇರಿಯಲ್ಲಿ ಸಂಜೆ 6.45ರ ಸುಮಾರಲ್ಲಿ ಪ್ರಶಾಂತ್ ಮಾಡಾಳು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿದ್ದು, ಲಂಚ ಸ್ವೀಕರಿಸುತ್ತಿದ್ದಾಗ ನೋಟಿನ ಕಂತೆ ತುಂಬಿದ ಮೂರು ಬ್ಯಾಗ್‌ಗಳನ್ನು ಲೋಕಾಯುಕ್ತರು ವಶ ಪಡಿಸಿಕೊಂಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ಪ್ರಶಾಂತ್, ನಿಯೋಜನೆ ಮೇಲೆ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ.
ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆಗೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ ಮಾಡಾಳ್ ವಿರೂಪಾಕ್ಷಪ್ಪ 81 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಮಗನಿಗೆ ತಲುಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.