ಎಂ ಬಿ ಪಾಟೀಲ್ ಪಂಚಮಸಾಲಿ ಪೀಠ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.! ಮತ್ಯಾರಾದರೂ ಟ್ರೈ ಮಾಡಿದ್ರೆ ಸರ್ವನಾಶ – ಬಿಸಿ ಪಾಟೀಲ್
ದಾವಣಗೆರೆ: ಪಕ್ಷ ಸಂಘಟನೆಗಾಗಿ ಆಗಮಿಸುವ ಅರುಣ್‌ಸಿಂಗ್ ಅವರಿಗೆ ಸೂಟ್‌ಕೇಸ್ ಒಯ್ಯಲು ಬರುತ್ತಾರೆ ಎಂದು ಹೇಳಿಕೆ ನೀಡುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಇನ್ನಾದರೂ ಅವರು ಇಂತಹ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ಭೇಟಿ ನೀಡುವುದು ಪಕ್ಷ ಸಂಘಟನೆ ಮತ್ತು ರಾಜ್ಯದ ಅಭಿವೃದ್ಧಿ ಗಮನಿಸುವುದಕ್ಕಾಗಿ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಲು ಹೋಗಿ ಶಾಸಕ ಎಂ.ಬಿ. ಪಾಟೀಲ್ ಸೇರಿ ಹಲವರು ಈಗಾಗಲೇ ಇಂಥ ಪ್ರಯತ್ನ ಮಾಡಿ ’ಕೈ’ ಸುಟ್ಟುಕೊಂಡಿದ್ದಾರೆ. ಮುಂದೆ ಮತ್ತ್ಯಾರಾದರೂ ಮಾಡಲು ಮುಂದಾದರೆ ಸರ್ವ ನಾಶ ಆಗುತ್ತಾರೆ ಎಂದು ಹೇಳಿದರು.
ಒಂದು ಮನೆಯಲ್ಲಿದ್ದವರಿಗೆ ಎಲ್ಲರನ್ನೂ ತೃಪ್ತಿಪಡಿಸಲು ಆಗಲ್ಲ. ಸದ್ಯಕ್ಕೆ ಸಚಿವ ಸಂಪುಟದಲ್ಲಿ ಯಾರೂ ಅಸಮಾಧಾನಿಗಳಿಲ್ಲ. ನಾಲ್ಕು ಸಚಿವ ಸ್ಥಾನಗಳು ಸಿಎಂ ವ್ಯಾಪ್ತಿಯಲ್ಲಿದ್ದು, ಸಚಿವ ಸ್ಥಾನ ಹಂಚಿಕೆ ಮಾಡುವುದು ಸಿಎಂ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.