ಮಧ್ಯಪ್ರದೇಶದ ಭೋಪಾಲ್‌ನ ಘಟನೆಗೆ ಜಿಲ್ಲಾ ಎಐಡಿವೈಒ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ

IMG-20210819-WA0012

 

ದಾವಣಗೆರೆ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸಿದ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾನಿರತರ ಬಿಡುಗಡೆಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಘಟಕದಿಂದ ಗುರುವಾರ ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪರಶುರಾಮ್, ಭೋಪಾಲ್‌ನ ರೋಷನ್‌ಪುರ ಜಂಕ್ಷನ್‌ನಲ್ಲಿ ನಿನ್ನೆದಿನ ರಾಜ್ಯ ಮಟ್ಟದ ಪ್ರತಿಭಟನಾ ಪ್ರದರ್ಶನವನ್ನು ಸಂಘಟಿಸಲಾಗಿತ್ತು. ಪ್ರತಿಭಟನಾನಿರತರ ಮೇಲೆ ಅಲ್ಲಿನ ಪೊಲೀಸರು ಅನಾಗರಿಕವಾಗಿ ಕ್ರೂರ ಲಾಠಿ ಚಾರ್ಜ್ ಮಾಡಿ, ಎಐಡಿವೈಒನ ರಾಜ್ಯಾಧ್ಯಕ್ಷರಾದ ಲೋಕೇಶ್ ಶರ್ಮಾ ಮತ್ತು ಉಪಾಧ್ಯಕ್ಷರಾದ ವಿಜಯ್ ಶರ್ಮಾ ಮತ್ತು ನಿರುದ್ಯೋಗ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಪ್ರಮೋದ್ ನಾಮದೇವ್ ಅವರನ್ನು ಥಳಿಸಿ ಬಂಧಿಸಲಾಗಿದ್ದು, ನೂರಾರು ಪ್ರತಿಭಟನಾನಿರತರು ಲಾಠಿ ಚಾರ್ಜ್ನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರದೇಶದಲ್ಲಿ ಕಳೆದ 4 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ. ಕೆಲವು ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸಿದ ನಂತರವೂ ಅವರಿಗೆ ನೇಮಕಾತಿ ಆದೇಶವನ್ನು ನೀಡಿಲ್ಲ. ಅವರಲ್ಲಿ ಹಲವರು ಇನ್ನು ಕೆಲವೇ ದಿನಗಳಲ್ಲಿ ತಮ್ಮ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ನಿರುದ್ಯೋಗ ವಿರೋಧಿ ಹೋರಾಟ ಸಮಿತಿ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ, ಪೊಲೀಸರು ಅವರ ಮೇಲೆ ಅನಾಗರಿಕವಾಗಿ ಲಾಠಿ ಪ್ರಹಾರ ನಡೆಸಿದರು ಎಂದು ಕಿಡಿಕಾರಿದರು.

ಈ ಲಾಠಿ ಚಾರ್ಜ್ನಲ್ಲಿ ಗಾಯಗೊಂಡ ಸಂಘಟನೆಗಳ ಯುವಕರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಮತ್ತು ಬಂಧಿತ ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗುರುಪ್ರಸಾದ್, ಶಶಿಕುಮಾರ್, ಅನಿಲ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!