ಹೋಳಿ ಆರ್ಭಟದಲ್ಲೂ ರುಚಿಪ್ರಿಯರಿಗೆ ಖುಷಿಯ ಔತಣ ನೀಡಿದ ಮಂಡಕ್ಕಿ ಮೆಣ್ಸಿನಕಾಯಿ ತಿನ್ನುವ ಸ್ಪರ್ಧೆ
ದಾವಣಗೆರೆ: ಎರಡು ವರ್ಷಕ್ಕೊಮ್ಮೆ ಸಂಭ್ರಮದ ಶಿಖರಾಗ್ರವನ್ನು ತಲುಪುವ ಸಂದರ್ಭವೇ ನಗರದೇವತೆ ಶ್ರೀದುಗ್ಗಮ್ಮ ಜಾತ್ರೆ.ಕೊರೋನಾ ಕರಿಛಾಯೆ ದೂರವಾಗಿ ಸಂತಸ-ಸಡಗರಗಳ ಮಹತ್ವದ ಸಂದರ್ಭವೆನಿಸಿದುದು ಈ ಬಾರಿಯ ವಿಶೇಷ ಎನಿಸಿತ್ತು.ಜಾತ್ರೆಯ ಜನಜಂಗುಳಿಗೆ ಕುಸ್ತಿ ಸ್ಪರ್ಧೆ ಮತ್ತು ಟಗರು ಕಾಳಗದ ಮೈದಾನಗಳು ಪ್ರಮುಖ ಸ್ಥಳಗಳಾಗಿ ಗಮನ ಸೆಳೆಯುವುದು ರೂಢಿಯಾಗಿದೆ. ಈ ಸಡಗರಕ್ಕೆ ಈ ಸಾರಿ ಜೊತೆಯಾದ ಮತ್ತೊಂದು ಸಂಭ್ರಮವೆಂದರೆ ಹೋಳಿ.ಬಣ್ಣದ ಎರಚಾಟ, ಡಿಜೆ ಧ್ವನಿಗೆ ಕುಣಿತದ ಜೋರು ಹೀಗೆ ನಗರವಿಡೀ ಸಂಭ್ರಮೋತ್ಸಾಹದ ಹಬ್ಬಕ್ಕೆ ಸಾಕ್ಷಿಯಾಯಿತು. ಅರೆ,ಇಷ್ಟೇ ಅಲ್ಲ ಮತ್ತೊಂದು ಕಚಗುಳಿಯಂತಹ ಸಡಗರ ನಗರದ ರೋಟರಿ ಬಾಲಭವನದ ಆವರಣದಲ್ಲಿ ಸಾಕ್ಷಾರಗೊಂಡಿತ್ತು. ಅದು ಬಹುಶಃ ಇಡೀ ರಾಜ್ಯಕ್ಕೆ ವಿಶಿಷ್ಟ ಎನಿಸಿದ ಸ್ಪರ್ಧೆ.ದಾವಣಗೆರೆ ಇಂತಹ ಅನೇಕ ಪ್ರಥಮಗಳ ತವರೂರು ಎಂಬುದು ಅತಿಶಯೋಕ್ತಿಯ ಮಾತೇನಲ್ಲ.
ಆವರಣದ ಒಂದು ಕಡೆ ಎಣ್ಣೆಕಾಯಿಸಿದ ಚುರುಚುರು ಶಬ್ಬ. ಪಕ್ಕದಲ್ಲೇ ದೊಡ್ಡ ಬಾಂಡಲಿಯಲ್ಲಿ ಚೀಲದಲ್ಲಿನ ಗರಿಷ್ಟ ಪ್ರಮಾಣದ ಮಂಡಕ್ಕಿಯನ್ನು ತೋಯಿಸಿ ನಂತರ ಮೊದಲಿಗೇ ಸಿದ್ದಪಡಿಸಲಾದ ಒಗ್ಗರಣೆಗೆ ಮಿಕ್ಸ್ ಮಾಡುವ ಪ್ರಕ್ರಿಯೆ. ಹೀಗೆ ತೋಯ್ಸಿದ ಮಂಡಕ್ಕಿ,ಬಿಸಿ ಬಿಸಿ ಹಿಟ್ಟು ಹಚ್ಚಿದ ಮೆಣ್ಸಿನಕಾಯಿ ಸಿದ್ದವಾಯಿತು. ಅದೋ ನಗರದ ಮೇಯರ್ ಶ್ರೀಮತಿ ಜಯಮ್ಮ ಗೋಪಿನಾಥ್ ಬಂದೇ ಬಿಟ್ಟರು! ನಂತರ ಉಪಮೇಯರ್ ಶ್ರೀಮತಿ ಗಾಯತ್ರಿಬಾಯಿ ಯವರು ಜೊತೆಯಾದರು. ಮಂಡಕ್ಕಿ ಮೆಣ್ಸಿನಕಾಯಿ ತಿನ್ನುವ ಸ್ಪರ್ಧೆಗೆ ಸ್ವತಃ ಅವರೇ ರುಚಿಯನ್ನು ನೋಡಿ ಚಾಲನೆ ನೀಡಿದರು. ಅವರಿಗೂ ದಾವಣಗೆರೆ ಖ್ಯಾತಿಯ ಈ ತಿನಿಸಿಗೆ ಸ್ಪರ್ಧೆಯ ಅವಕಾಶ ದೊರೆತದ್ದು ತುಂಬಾ ವಿಶೇಷವೆನಿಸಿತ್ತು.ಎಲ್ಲಾ ರೀತಿಯ ಪ್ರೋತ್ಸಾಹ ದೊರೆಯಲು ತಾಯಿ ಶ್ರೀದುರ್ಗಾಂಬೆಯ ಕೃಪಾಕಟಾಕ್ಷ ನಮಗಿರಲಿ ಎಂದರು.
ಈಗ ಶರುವಾಯಿತು ನೋಡಿ ಅಸಲಿ ಪ್ರಕ್ರಿಯೆ. ಸಾಲಾಗಿ ಕುಳಿತು ಆರುಮಂದಿಗೆ ಒಂದು ತಂಡದತೆ ಮಂಡಕ್ಕಿ ಮೆಣ್ಸಿನಕಾಯಿಯನ್ನು ತಿನ್ನಲು ಶುರುವಿಟ್ಟುಕೊಂಡರು. ಎಷ್ಟಾದರೂ ಅತಿ ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕೆಂಬ ಸಂಘಟಕರ ಮಾತು ಸ್ಪರ್ಧಿಗಳಿಗೆ ಖುಷಿಯನ್ನು ನೀಡಿತ್ತು. ಥತ್‌ರಿಕೆ….. ಬರೀ ಐದು ನಿಮಿಷ ಮಾತ್ರ ಎಂದು ಪ್ರಕಟಿಸಲಾಯಿತು. ಅಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ತಿಂದವನಿಗೆ ಸಾವಿರಾರು ರೂ.ಗಳ ಬಹುಮಾನ ಒಲಿಯಲಿತ್ತು. ಹದಿನೆಂಟು ಮಂದಿ ತಿನ್ನುಬಾಕರು ಈ ಸ್ಪರ್ಧೆಯ ಸವಿಯನ್ನು ಸವಿದರು.ನಾವೇನು ಕಮ್ಮಿಯಿಲ್ಲ ಎಂದು ಇಬ್ಬರು ಮಹಿಳಾಮಣಿಗಳು ಮೆಣ್ಸಿನಕಾಯಿ ಕಡಿಯುತ್ತಲೇ ಮಂಡಕ್ಕಿಯನ್ನು ಸವಿದರು. ಒಟ್ಟಾರೆಯಾಗಿ ತುಂಬು ಉತ್ಸಾಹವು ಎಲ್ಲಾ ಸ್ಪರ್ಧಿಗಳಲ್ಲಿ ತುಂಬಿ ತುಳುಕುತ್ತಿತ್ತು. ಒಂದು ಗಂಟೆಯ ಹೊತ್ತಿಗೆ ಸ್ಪರ್ಧೆಯ ತಿಣುಕಾಟಕ್ಕೆ ಮಂಗಳ ಹಾಡಲಾಯಿತು.
ಪತ್ರಿಕೆ ಬಳಗದವರಾದ ಹೆಚ್.ವೆಂಕಟೇಶ್,ಶ್ರೀಮತಿ ಸತ್ಯಭಾಮ ,ಕೆ.ಎನ್.ಜಯಪ್ರಕಾಶ್, ಶ್ರೀಮತಿ ಭಾರತಿ, ಮಹಾಂತೇಶ್ ವಿ.ಒಣರೊಟ್ಟಿ,ರಾಘವೇಂದ್ರ ನಾಯರಿ, ಸಿ.ಕೆ.ಆನಂದತೀರ್ಥಾಚಾರ್, ಎನ್.ಕೆ.ಕೊಟ್ರೇಶ್, ಬಾಡದ ಆನಂದರಾಜ್, ವಾಸಿಂ ಮತ್ತಿತರರು ಸ್ಪರ್ಧೆಯ ಉಸ್ತುವಾರಿಯನ್ನು ಚೊಕ್ಕವಾಗಿ ನಿರ್ವಹಿಸಿದರು.
ಸಂಜೆಯ 7 ಗಂಟೆ ಸುಮಾರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪಕ್ಕೆ ಮತ್ತೆ ರೋಟರಿ ಹಾಲ್‌ನಲ್ಲಿ ಆಸಕ್ತರೆಲ್ಲಾ ಜಮಾಯಿಸಿದರು. ಬಹುಮಾನ ಪಡೆದವರಿಗೆ ಕುತೂಹಲ. ಆನಂದತೀರ್ಥಾಚಾರ್ ಸ್ವಾಗತ,ಕಾರ್ಯಕ್ರಮ ನಿರೂಪಣೆಯನ್ನು ನಿರ್ವಹಿಸಿದರು.
ಸಂಸ್ಥಾಪಕ ವಿ,ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ಬಳಗವು ಈ ರೀತಿಯ ವಿಶಿಷ್ಟ ಕಾರ್ಯಕ್ರಮಗಳಿಂದ ಜನಾದರಣೆಯನ್ನು ಗಳಿಸುತ್ತಿದೆ. ಇಂತಹ ಸ್ಪರ್ಧೆಗಳಿಗೆ ಸಾರ್ವಜನಿಕರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದರು. ಪತ್ರಿಕಾ ಬಳಗದ ಕೆ.ಎನ್.ಜಯಪ್ರಕಾಶ್ ಸಾಂದರ್ಭಿಕವಾಗಿ ಮಾತನಾಡಿದರು. ಅತ್ಯಂತ ಜನಪ್ರಿಯ ತಿನಿಸು ಎನಿಸಿರುವ ಮಂಡಕ್ಕಿ-ಮೆಣ್ಸಿನಕಾಯಿ ತಿನ್ನುವ ಸ್ಪರ್ಧೆಗೆ ಪತ್ರಿಕಾ ಬಳಗವು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಬಹಳಷ್ಟು ಕಡೆ ಆಯಾ ಪ್ರದೇಶಗಳಲ್ಲಿ ವಿಶಿಷ್ಟ ತಿನಿಸುಗಳ ಮೂಲಕ ಜನತೆಯ ಆಕರ್ಷಣೆಯನ್ನು ಸೆಳೆಯುತ್ತಿವೆ.ಮದ್ದೂರಿನ ವಡೆ, ಮೈಸೂರಿನ ಜಾಮೂನು,ಧಾರವಾಡದ ಫೇಡಾ ಇತ್ಯಾದಿಯನ್ನು ಉದಾಹರಿಸಬಹುದು. ಇದೇ ರೀತಿ ವಿದೇಶಗಳಲ್ಲೂ ಅನೇಕ ಪಾನೀಯಗಳು ಖ್ಯಾತಿಯನ್ನು ಪಡೆದಿವೆ. ತಿನಿಸು ಯಾವುದೇ ಇರಲಿ ಅದು ಅನೇಕ ರೀತಿಯಲ್ಲಿ ವಾಣಿಜ್ಯ ಪರವಾದ ಚಟುವಟಿಕೆಗೂ ಸಹಕಾರಿಯಾಗುತ್ತದೆ.ಮಂಡಕ್ಕಿ ಸಿದ್ಧ ಪಡಿಸುವುದು, ಅದಕ್ಕೆ ಬೇಕಾದ ಇತರ ಪದಾರ್ಥ ಗಳನ್ನುಕೊಂಡುಕೊಳ್ಳುವಿಕೆ,ಮೆಣ್ಸಿನಕಾಯಿ ಮತ್ತು ಹಿಟ್ಟು ಇದಕ್ಕೆ ಬೇಕಾದ ಎಣ್ಣೆ… ಹೀಗೆ ಹಲವು ರೀತಿಯ ಆರ್ಥಿಕ ವಹಿವಾಟಿಗೂ ಈ ತಿನಿಸು ಕಾರಣವಾ ಗುವುದುಂಟು.
ದಾವಣಗೆರೆಯ ಪ್ರಸಿದ್ದಿಗೆ ನಂಟನ್ನು ಬೆಸೆದುಕೊಂಡಿರುವ ಮಂಡಕ್ಕಿ ಮೆಣ್ಸಿನಕಾಯಿ ತಿನ್ನುವ ಸ್ಪರ್ಧೆಯ ಆಯೋಜನೆಯೂ ಒಂದು ಆಸಕ್ತಿದಾಯಕ ದಾಖಲೆಯಾಗುವ ನಿರೀಕ್ಷೆ ಇದೆ ಎಂದರು. ಮಾಜಿ ಮೇಯರ್ ಎಸ್.ಟಿ.ವೀರೇಶ್ ಮಾತನಾಡುತ್ತಾ ಪತ್ರಿಕಾ ಬಳಗದ ಈ ವಿನೂತನ ಯೋಜನೆ- ಯೋಚನೆಗಳ ಹಿಂದಿನ ಪ್ರೇರಕರೇ ಬಳಗದ ಸಂಸ್ಥಾಪಕ ರಾಗಿರುವುದು ಹೆಮ್ಮೆಯ ಸಂಗತಿ. ಇಂತಹ ಸ್ಪರ್ಧೆಗಳು ನಮ್ಮ ಜೀವನೋತ್ಸಾಹ ಇಮ್ಮಡಿ ಆಗಲಿ ಸಹಕಾರಿ ಆಗುತ್ತದೆ. ಪತ್ರಿಕಾ ಬಳಗದ ಇಂತಹ ವಿಶಿಷ್ಟ ಕಾರ್ಯಕ್ರಮಗಳು ನಗರದ ಕೀರ್ತಿಯನ್ನು ಇಮ್ಮಡಿಗೊಳಿಸಿರುವುದು ಪ್ರಶಂಸಾರ್ಹ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಳಗದ ಅಧ್ಯಕ್ಷೆ ಶ್ರೀಮತಿ ಸತ್ಯಭಾಮ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಬಳಗದ ಚಟುವಟಿಕೆಗಳಲ್ಲಿ ನಾನು ಕ್ರಿಯಾಶೀಲವಾಗಿ ಭಾಗವಹಿಸುತ್ತಿರುವೆ. ಮಹಿಳೆಗೂ ಪದಾಧಿಕಾರಿ ಸ್ಥಾನದ ಅವಕಾಶ ಕಲ್ಪಿಸುವ ಮೂಲಕ ನನ್ನ ಬದ್ಧತೆಯನ್ನು ಪ್ರೋತ್ಸಾಹಿಸಿರುವ ಬಳಗದ ಇತರ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಎನ್.ಕೆ.ಕೊಟ್ರೇಶ್ ವಂದಿಸಿದರು. ಸ್ಪರ್ಧಾ ವಿಜೇತರ ಪರವಾಗಿ ಹೊನ್ನಪ್ಪ ಅಜ್ಜೋಳ ಮತ್ತು ಶ್ರೀಮತಿ ವನಮಾಲ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಡು ಸಂಘಟಕರ ಪ್ರಯತ್ನಕ್ಕೆ ಜೋಹಾರ್ ಹೇಳಿದರು.
ಮಂಡಕ್ಕಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯ ಫಲಿತಾಂಶಗಳು
ಹೊನ್ನಪ್ಪ ಅಜ್ಜೋಳ (ಪ್ರಥಮ ಬಹುಮಾನ), ಬಿ.ವಾಸು (ದ್ವಿತೀಯ), ವಚನ್ ಮತ್ತು ತೇಜಪ್ಪ (ತೃತೀಯ-ಎರಡು ), ಸಮಾಧಾನಕರ ಬಹುಮಾನಗಳು : ಶ್ರೀಮತಿ ವನಮಾಲ ಮತ್ತು ಪ್ರಜ್ವಲ್ ಪಿ.ಸಾಕರೆ