Farmer : ಮಣ್ಣೆತ್ತಿನ ಅಮವಾಸ್ಯೆ : ರೈತನ ಬೆನ್ನೆಲುಬಾದ ಎತ್ತುಗಳ ಅದ್ದೂರಿ ಪೂಜೆ

ದಾವಣಗೆರೆ : ಸುಗ್ಗಿಕಾಲದ ಆರಂಭವೆಂದೇ ಆಶಿಸುವ, ಮಳೆರಾಯ ಭೂತಾಯಿ ಮಡಿಲನ್ನು ತಂಪಿಸುವ, ಈ ಕಾಲಾರಂಭದಲ್ಲಿ ಬರುವ ಈ ಮಣ್ಣೆತ್ತಿನ ಅಮಾವಾಸ್ಯೆ, ಎಲ್ಲಾ ಅಮಾವಾಸ್ಯೆಗಳಿಗಿಂತ ವಿಶೇಷವಾದ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತಾಪಿ ಜನ ಸೇರಿದಂತೆ ಸಿಟಿಗರು ಸಹ ಅದ್ದೂರಿಯಿಂದ ಆಚರಿಸಿದರು.
ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗುವ ಕಾಲ ಇದಾಗಿದ್ದುಘಿ, ರೈತರ ಮೊಗದಲ್ಲಿ ಸಂತಸವನ್ನು ತರುವ ವರುಣದೇವ, ನಾಡಿನ ಸುಗ್ಗಿಕಾಲಕ್ಕೆ ಭೂತಾಯಿಗೆ ತನ್ನ ಜಲಧಾರೆ ಮೂಲಕ ತಂಪು ಎರೆಯುವನು. ಇಂತಹ ಸಂದರ್ಭದಲ್ಲಿ ರೈತ ತನ್ನ ಜೀವದ ಜೀವನಾಡಿಗಳಾದ, ಎತ್ತುಗಳನ್ನು ಪೂಜಿಸಿ ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಾನೆ. ಕೇವಲ ಒಬ್ಬ ರೈತ ತನ್ನ ಬರಿಯ ಕೈಯಲ್ಲಿ ಹೊಲವನ್ನು ಹಸನು ಮಾಡಿ, ಕಳೆ ತೆಗೆದು, ಗೊಬ್ಬರ ಹಾಕಿ,ಬಂದ ಬೆಳೆಯನ್ನು ರಾಶಿ ಮಾಡಬೇಕಾದರೆ ಅದು ಅಸಾಧ್ಯದ ಮಾತು. ಇಂತಹ ಎಲ್ಲಾ ಕೆಲಸಗಳನ್ನು ಆತ ಜೋಡೆತ್ತುಗಳ ಸಹಕಾರವನ್ನು ಪಡೆದು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸಲಾಗುತ್ತದೆ.
ದಾವಣಗೆರೆ ಕುಂಬಾರ ಓಣಿ, ನ್ಯಾಮತಿ ಪಟ್ಟಣದ ಕುಂಬಾರ ಬೀದಿಯಲ್ಲಿ ಮಣ್ಣಿನ ಎತ್ತುಗಳನ್ನು ಜನರು ಭಕ್ತಿ ಭಾವದಿಂದ ತೆಗೆದುಕೊಂಡರು ಹೋದರು. ಮುಂಗಾರು ಆರಂಭದ ಮೊದಲ ಹಬ್ಬವಾಗಿರುವ ಮಣ್ಣಿನ ಎತ್ತಿನ ಅಮಾವಾಸ್ಯೆ ಹಬ್ಬಗಳನ್ನು ಕರೆದುಕೊಂಡು ಬರುವ ಹಬ್ಬವಾಗಿದೆ ಎಂದು ಗ್ರಾಮೀಣ ಪ್ರದೇಶದ ಜನರು ಮಾತು. ಇಲ್ಲಿಂದಲೇ ನಮ್ಮ ಹಬ್ಬಗಳು ಆರಂಭವಾಗುತ್ತವೆ.
ಅರೆಮಲೆನಾಡಿನ ಭಾಗವಾಗಿರುವ ನ್ಯಾಮತಿ ಮತ್ತು ಹೊನ್ನಾಳಿ, ದಾವಣಗೆರೆ ಪಟ್ಟಣ ಮತ್ತು ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ರೈತರ ಜೊತೆಗೆ ಹೊಲ ತೋಟಗಳಲ್ಲಿ ಒಂದಾಗಿ ದುಡಿಯುವ ಎತ್ತುಗಳಿಗೆ ಅದರಲೂ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜೆ ಸಲ್ಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಭಾರತೀಯ ಒಕ್ಕಲುತನದಲ್ಲಿ ಮಹತ್ವ ಪಾತ್ರ ವಹಿಸುವ ಮಣ್ಣಿನ ಎತ್ತಿನ ಅಮಾವಾಸ್ಯೆಯಂದು ಎತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ರೈತರು ಕೂಡಾ ಎತ್ತುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಬಣ್ಣಗಳಿಂದ ಶಂಗಾರ ಮಾಡಿ ಪೂಜಿಸುತ್ತಾರೆ. ಸ್ಥಳೀಯ ಪೇಟೆಯಲ್ಲಿ ಮಣ್ಣಿನ ಎತ್ತುಗಳ ಮಾರಾಟ ಜೋರಾಗಿತ್ತು. ದಾವಣಗೆರೆ-ನ್ಯಾಮತಿ ಪಟ್ಟಣದ ಐವತ್ತಕ್ಕೂ ಹೆಚ್ಚು ಕುಟುಂಬಗಳು ಎತ್ತುಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ತೆರಳಿ ಮಾರಾಟ ಮಾಡಿದರೆ, ದಾವಣಗೆರೆಯಲ್ಲಿ ಹಳೆಪೇಟೆ, ಕುಂಬಾರ ಬೀದಿಗಳಲ್ಲಿ ಮಣ್ಣೆತ್ತನ್ನು ಜನರು ಭಕ್ತಿ ಭಾವದಿಂದ ತೆಗೆದುಕೊಂಡು ಹೋದರು. ಜೋಡಿ ಎತ್ತುಗಳ ದರ 30 ರಿಂದ ರೂ.150 ರೂಪಾಯಿವರೆಗೆ ಮಾರಾಟವಾಯಿತು. ಇದರ ಜತೆಗೆ ಎತ್ತುಗಳಿಗೆ ನೀರುಣಿಸುವ ಬಾನಿಗಳನ್ನು ಕೊಡಲಾಯಿತು.
ಜಗತ್ತು ಆಧುನಿಕತೆಯತ್ತ ಸಾಗಿದ್ದರೂ ಇನ್ನೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಸಲು ಹಲವಾರು ತಲೆಮಾರುಗಳಿಂದ ವಂಶ ಪಾರಂಪರ್ಯವಾಗಿ ಬಂದಿರುವ ಕುಂಬಾರ ಸಮಾಜದ ಬಂಧುಗಳು ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಣ್ಣಿನ ಎತ್ತುಗಳ ನಿರ್ಮಾಣ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವುದಕ್ಕೆ ಸಾಕ್ಷಿಯಾಗಿದೆ.
ಒಂದು ವರ್ಷದ ಮಳೆಗಾಲದ ಅವಧಿಯಲ್ಲಿ ಮಣ್ಣಿನ ಪೂಜೆ ಮಾಡಲಾಗುತ್ತದೆ ಎತ್ತುಗಳ ಪೂಜೆ ಪ್ರಥಮ ಮಣ್ಣಿನ ಪೂಜೆ, ನಂತರ ಆಷಾಢ ಮಾಸದಲ್ಲಿಯ ನಾಲ್ಕು ಸೋಮವಾರದಂದು ಶಂಭುಲಿಂಗನ ಮಂಗಳವಾರದಂದು ಪೂಜಿಸುವ ಗುಳ್ಳವ್ವ, ಶ್ರಾವಣದಲ್ಲಿ ನಾಗಪಂಚಮಿಯ ನಾಗದೇವತೆ, ಚತುರ್ಥಿಯ ಗಣೇಶ ನಂತರ ಕೆಲವರು ಗೌರಿಯನ್ನು ಪೂಜಿಸುತ್ತಾರೆ ಎನ್ನುತ್ತಾರೆ ಗೃಹಿಣಿಯರು .ರೈತರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಎತ್ತು ರೈತರಿಗೆ ಎತ್ತುಗಳೇ ಜೀವಾಳ. ತಮ್ಮ ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಹಾಯಕವಾಗಿರುವ ಎತ್ತುಗಳೆಂದರೆ ರೈತರಿಗೆ ತಮ್ಮ ಪ್ರಾಣಕ್ಕಿಂತಲೂ ಮಿಗಿಲಾದ ಪ್ರೀತಿ. ರೈತರು ಎಲ್ಲಾ ಹಬ್ಬಗಳಲ್ಲಿಯೂ ಎತ್ತು – ಹಸುಗಳಿಗೆ ಪ್ರಮುಖ ಸ್ಥಾನ ನೀಡಲಾಗುತ್ತಾರೆ. ಎಂಬುದು ಬಸಯ್ಯ ಒಡೆಯರ ಹತ್ತೂರುರವರ ಮಾತು. ಒಟ್ಟಾರೆ ಮಣ್ಣೆತ್ತಿನ ಪೂಜೆ ಅದ್ದೂರಿಯಾಗಿ ನಡೆಯಿತು.