ಜನವರಿ 19 ರಂದು ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ’ಪ್ರಜಾಧ್ವನಿ‘ ಯಾತ್ರೆಯ ಬೃಹತ್ ಸಭೆ: ಎಸ್ ಎಸ್ ಮಲ್ಲಿಕಾರ್ಜುನ್
ದಾವಣಗೆರೆ: ಬಿಜೆಪಿಯ ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಚುನಾವಣೆ ಅಂಗವಾಗಿ ಕೆಪಿಸಿಸಿ ಇಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯು ಜ.೧೯ರಂದು ಸಂಜೆ ೪ ಗಂಟೆಗೆ ದಾವಣಗೆರೆಗೆ ಆಗಮಿಸಲಿದ್ದು, ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿರುವ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಸೇರಿದಂತೆ ಮತ್ತಿತರ ಪಕ್ಷದ ವರಿಷ್ಠರು ಆಗಮಿಸಲಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲಿ ಸುಮಾರು ೫೦ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದು ಇಲ್ಲಿನ ಹೈಸ್ಕೂಲು ಮೈದಾನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬಿಜೆಪಿ ಸರ್ಕಾರದ ಸಾವಿರಾರು ಹಗರಣಗಳನ್ನು ಜನರು ನೋಡುತ್ತಿದ್ದಾರೆ. ಕಮಿಷನ್ ದಂಧೆ ನಡೆಯುತ್ತಿದೆ. ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ೮೨ ವರ್ಷದ ಮುಗ್ಧ ಗುತ್ತಿಗೆದಾರರನ್ನ ಜೈಲಿಗೆ ಹಾಕಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ಎಲ್ಲರನ್ನೂ ಹೆದರಿಸಿ, ಜೈಲಿಗೆ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹರಿಹಾಯ್ದರು.
ಜಿಲ್ಲೆಯಲ್ಲಿಯೇ ನಮ್ಮ ಸರ್ಕಾರದಲ್ಲಿ ಚಾಲನೆ ನೀಡಿದ್ದ ಅಭಿವೃದ್ಧಿ ಕಾರ್ಯಗಳನ್ನೇ ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಹೊರತು ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ ಎಂದು ದೂರಿದರು.ಶಾಮನೂರು ಶಿವಶಂಕರಪ್ಪ ಮಾತನಾಡಿ, ಚುನಾವಣಾ ಗಾಳಿ, ಜನರ ಒಲವು ಕಾಂಗ್ರೆಸ್ ಕಡೆಗೆ ಬೀಸುತ್ತಿದೆ. ಕಾರಣ ಪಿಎಸ್ಐ, ಸ್ಯಾಂಟ್ರೋ ರವಿ ಸೇರಿದಂತೆ ಈ ಸರ್ಕಾರದ ದಿನಕ್ಕೊಂದು ಹಗರಣ ಹೊರ ಬರುತ್ತಿದ್ದು, ಇವುಗಳನ್ನು ನೋಡಿ ಜನರು ಬೇಸತ್ತಿದ್ದಾರೆ. ಭ್ರಷ್ಟ ಬಿಜೆಪಿಗೆ ಜನರು ಚುನಾವಣೆಯಲ್ಲಿ ಚುರುಕು ಮುಟ್ಟಿಸಲಿದ್ದು, ನಾಳೆಯೇ ಚುನಾವಣೆ ನಡೆದರು ಕಾಂಗ್ರೆಸ್ ಗೆಲುವು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹರಿಹರ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಾಜಿ ಶಾಸಕರಾದ ಶಾಂತನಗೌಡ, ಹೆಚ್.ಪಿ. ರಾಜೇಶ್, ತೇಜಸ್ವಿ ಪಟೇಲ್, ಮುಖಂಡರುಗಳಾದ ಆಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಬಸವಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.