ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಭಾರೀ ಭ್ರಷ್ಟಾಚಾರ; ಬಿಜೆಪಿ ನಾಯಕರ ಬಳಿ ಇದೆಯಂತೆ ದಾಖಲೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಈ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ ಎಂದು ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ 40 ಎಂಬುದು ಕಾಂಗ್ರೆಸ್ ಪಕ್ಷದ ಟೂಲ್‍ಕಿಟ್. ಅವರ ಮಾತಿನಲ್ಲಿ ಹುರುಳಿಲ್ಲ. ಶೇ 40 ಸರಕಾರ ನಮ್ಮದಲ್ಲ. 2016-18ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅದಕ್ಕಿಂತ ಹೆಚ್ಚು ಕಮಿಷನ್ ಇತ್ತು. 115 ಕೋಟಿ ಮೊತ್ತದ ಟೆಂಡರ್ ಶೂರ್ ಕಾಮಗಾರಿಯಲ್ಲಿ 53.86 ಶೇಕಡಾ ಕಮಿಷನ್ ಇತ್ತು. ಅದರ ದಾಖಲೆಗಳು ನಮ್ಮಲ್ಲಿವೆ ಎಂದು ತಿಳಿಸಿದರು.

86.46 ಕೋಟಿಯ ಇನ್ನೊಂದು ಕಾಮಗಾರಿಯಲ್ಲಿ 48 ಶೇ ಕಮಿಷನ್ ಇತ್ತು ಎಂದು ತಿಳಿಸಿದರು. ಇನ್ನೊಂದು ಕಾಮಗಾರಿಯಲ್ಲಿ 36.6 ಶೇಕಡಾ ಕಮಿಷನ್ ಇತ್ತು ಎಂದು ಆರೋಪಿಸಿದರು. ಕಾಂಗ್ರೆಸ್‍ನದು ಶೇ 54 ಸರಕಾರ. ಅದಕ್ಕಾಗಿಯೇ ಅವರನ್ನು ಜನರು ತಿರಸ್ಕರಿಸಿದರು ಎಂದು ತಿಳಿಸಿದರು.

ಸದಾಶಿವ ಆಯೋಗದ ವರದಿ ನೀಡಿ ಅಧಿಕಾರದಲ್ಲಿ ಆರು ವರ್ಷ ಇದ್ದಾಗ ಅನುಷ್ಠಾನ ಮಾಡದವರು ಇವತ್ತು ಅಧಿಕಾರಕ್ಕೆ ಬಂದರೆ ಸದನದ ಮೊದಲ ಅಧಿವೇಶನದಲ್ಲೇ ಜಾರಿ ಮಾಡುವ ಭರವಸೆ ನೀಡುತ್ತಿದ್ದಾರೆ. ಯಾರನ್ನು ದಾರಿ ತಪ್ಪಿಸುತ್ತೀರಿ ನೀವು? ಅವತ್ಯಾಕೆ ಮಾಡಿಲ್ಲ ಎಂದು ಕೇಳಿದರು.
ಕೋಲಾರದ ಸೀಟು ಸೇಲ್ ಆಗಿದೆ
ಕೋಲಾರದ ಸೀಟು ಸೇಲ್ ಆಗಿದೆ. ಇವರು ಕೊಂಡುಕೊಂಡಿದ್ದಾರೆ. ಗೆಲ್ಲಿಸುವುದು ಸೋಲಿಸುವುದು ಜನರ ಕೈಯಲ್ಲಿದೆ. ಆ ಸೀಟು ಸೇಲಾಗಿದೆ. ಅದನ್ನು ಸಿದ್ದರಾಮಯ್ಯ ಕೊಂಡುಕೊಂಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಚುನಾವಣೆಗಾಗಿ ಆರೋಪ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿವರಿಸಿದರು.

ದಲಿತರಿಗೆ ವಂಚನೆ ಮಾಡಿದ್ದ ನೀವು ಈಗ ಭರವಸೆ ಕೊಡುತ್ತೀರಿ ಎಂದು ಆಪಾದಿಸಿದರು. ದಲಿತರಲ್ಲಿ ಭೂರಹಿತರು ಇದ್ದಾರೆ ಎನ್ನುವ ನೀವು ಸರಕಾರ ಇದ್ದಾಗ ಮಾಡಿದ್ದೇನು? ಇವತ್ತು ನಾವು ಜಮೀನು ಕೊಟ್ಟು ಗಂಗಾಕಲ್ಯಾಣದಡಿ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಸ್ವಯಂ ಉದ್ಯೋಗ ಕೊಡುತ್ತಿದ್ದೇವೆ. ಬ್ಯಾಕ್ ಲಾಗ್ ತುಂಬಿಸುವುದಾಗಿ ಹೇಳುವವರು ನಿಮ್ಮ ಸರಕಾರ ಇದ್ದಾಗ ಯಾಕೆ ತುಂಬಿಸಿಲ್ಲ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಕಾಂಗ್ರೆಸ್ಸಿನದು- ಸಿದ್ದರಾಮಯ್ಯರದು ದಾರಿ ತಪ್ಪಿಸುವ ಕೆಲಸ. ದಲಿತರ ಹೆಸರು ಹೇಳಿಕೊಂಡೇ ಅವರಿಗೆ ಮೋಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಹಿಂದೆ ಇತ್ತು. ರಕ್ಷಣೆ ವಿಚಾರದಲ್ಲೂ ಹಿಂದುಳಿದಿತ್ತು. ನಾವು ಅಭಿವೃದ್ಧಿ ಮತ್ತು ರಕ್ಷಣೆ ವಿಚಾರದಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷವು ಭಯೋತ್ಪಾದನೆ, ಲವ್ ಜಿಹಾದ್‍ಗೆ ಪೂರಕವಾಗಿ ಕೆಲಸ ಮಾಡುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಆರೋಪಿಸಿದರು.

ಶಿವಮೊಗ್ಗ, ಸಾಗರ, ಭದ್ರಾವತಿ, ತೀರ್ಥಹಳ್ಳಿಗಳಲ್ಲಿ ಪ್ರತಿಬಾರಿ ಕಾಂಗ್ರೆಸ್ ಯಾರ ಪರ ಇತ್ತು ಎಂಬುದು ಜನರಿಗೆ ಗೊತ್ತಿದೆ. ಬಾಂಬ್ ಹಾಕಿದವರನ್ನು ಮತ್ತು ಕೆಜಿ ಹಳ್ಳಿ- ಡಿಜೆ ಹಳ್ಳಿಯ ಗಲಭೆಯಲ್ಲಿ ಪಾಲ್ಗೊಂಡವರನ್ನು ಅಮಾಯಕ ಎಂದು ಬಿಂಬಿಸಲಾಗುತ್ತಿದೆ. ಗುಡಿಸಿ ಗುಂಡಾಂತರ ಮಾಡಿದ ಪಕ್ಷ ಕಾಂಗ್ರೆಸ್. ಗಾಜಿನ ಮನೆಯಲ್ಲಿ ಕುಳಿತು ಗುಂಡು ಹೊಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಾರೆ. ಆಚಾರವಿಲ್ಲದ ನಾಲಗೆ ಇವರದು. ಪ್ರಿಯಾಂಕ್ ಖರ್ಗೆಯಂತೂ ಮಹಿಳೆಯರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನ ನಾಟಕವನ್ನು ಜನರು ಗಮನಿಸಿ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!