ಭಾರತೀಯ ಮಜ್ದೂರ್ ಸಂಘದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಭಾರತೀಯ ಮಜ್ದೂರ್ ಸಂಘ
ಬೆಂಗಳೂರು: ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸೋಮವಾರ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯದ ಒಳ ಮತ್ತು ಹೊರ ಗುತ್ತಿಗೆ ನೌಕರರಿಗೆ ಸಂಬಂಧಿಸಿದ ಶ್ರೀನಿವಾಸಾಚಾರ್ ವರದಿಯನ್ನು ಜಾರಿ ಮಾಡಬೇಕು, ಸೇವೆಯ ಆಧಾರದ ಮೇಲೆ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು, ಸಾರಿಗೆ ಇಲಾಖೆ ನೌಕರರ ವೇತನವಯ ಪರಿಷ್ಕರಿಸಬೇಕು, ಸರ್ಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಫಲಾನುಭವಿಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಕನಿಷ್ಠ ವೇತನವನ್ನು 21 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್ ನಿಧಿಯಿಂದ ನೀಡುತ್ತಿರುವ ಪಿಂಚಣಿ 5 ಸಾವಿರಕ್ಕೆ ಏರಿಸಬೇಕು ಎಂದು ಆಗ್ರಹಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಗುತ್ತಿಗೆ ನೌಕರರ ಪದ್ಧತಿ ಕೈಬಿಟ್ಟು, ಕಾಯಂ ನೌಕರರಾಗಿ ಪರಿಗಣಿಸಬೇಕು. ರೈಲ್ವೆ, ವಿಮಾನ, ಸಾರಿಗೆ ಸೇರಿದಂತೆ ಸರ್ಕಾರಿ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ನೌಕರರಿಗೆ ಹೊಸ ಪಿಂಚಣಿ ಯೋಜನೆಯ ಬದಲು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
ಆರೋಗ್ಯ ಇಲಾಖೆಯಲ್ಲಿ ಒಳ ಮತ್ತು ಹೊರಗುತ್ತಿಗೆ ನೌಕರರಿಗೆ ಶ್ರೀನಿವಾಸರಾವ್ ವರದಿಯನ್ನು ಜಾರಿಗೆ ತರಬೇಕು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಅಕ್ಷರ ದಾಸೋಹ ಸಿಬ್ಬಂದಿಗೆ ಗೌರವಧನ ಹೆಚ್ಚಳ ಮಾಡಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು. ಕಾರ್ಮಿಕರ ಇ.ಎಸ್.ಐ. ಯೋಜನೆಯ ಸೌಲಭ್ಯದ ವೇತನ ಮಿತಿಯನ್ನು 21 ಸಾವಿರ ಬದಲಾಗಿ ರೂ. 35 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಿದರು.