ಪಾರ್ಟಿ ಹೆಸರಿನಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ಸ್ನೇಹಿತೆಯರ ಮೇಲೆ ಅತ್ಯಾಚಾರ
ಬೆಂಗಳೂರು: ಪಾರ್ಟಿ ಮಾಡುವ ಹೆಸರಿನಲ್ಲಿ ಸ್ನೇಹಿತೆಯರಿಬ್ಬರನ್ನು ಮನೆಗೆ ಕರೆದು ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಸಂತ್ರಸ್ತ ಯುವತಿಯರು ನೀಡಿರುವ ದೂರು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗರಕಿಪತಿ ಅಜಯ್ ವೆಂಕಟ್ ಸಾಯಿ ಅಲಿಯಾಸ್ ಅಜಯ್ (23) ಹಾಗೂ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಆದಿತ್ಯ ಅಭಿರಾಜ್ (26) ಬಂಧಿತರು.
ಆರೋಪಿ ಅಜಯ್, ಪಂಜಾಬ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಆದಿತ್ಯ, ನಗರದ ಕಾಲೇಜೊಂದರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಪಂಜಾಬ್‌ನಲ್ಲಿದ್ದ ಅಜಯ್, ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಕೋರಮಂಗಲದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಪ್ಲ್ಯಾಟ್‌ನಲ್ಲಿದ್ದ ಸ್ನೇಹಿತ ಆದಿತ್ಯ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಅಜಯ್, ಪಂಜಾಬ್‌ನಿಂದ ಫೆ. 4ರಂದು ಬೆಂಗಳೂರಿಗೆ ಬಂದಿದ್ದ. ಆದಿತ್ಯ ಮನೆಯಲ್ಲಿ ಉಳಿದುಕೊಂಡಿದ್ದ. ಫೆ. 5ರಂದು ಸಂಜೆ ಸ್ನೇಹಿತೆಗೆ ಕರೆ ಮಾಡಿದ್ದ ಅಜಯ್, ಮದ್ಯದ ಪಾರ್ಟಿ ಮಾಡೋಣವೆಂದು ಮನೆಗೆ ಕರೆದಿದ್ದ.
ಅಜಯ್ ಮಾತಿಗೆ ಒಪ್ಪಿದ ಯುವತಿ, ತನ್ನ ಸ್ನೇಹಿತೆಯನ್ನು ಜೊತೆಯಲ್ಲಿ ಕರೆದುಕೊಂಡು ಆದಿತ್ಯ ಮನೆಗೆ ರಾತ್ರಿ ಹೋಗಿದ್ದರು. ನಾಲ್ವರೂ ಮದ್ಯ ಕುಡಿದಿದ್ದರು. ತಡರಾತ್ರಿ ಸ್ನೇಹಿತೆಯರಿಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಅಜಯ್ ಹಾಗೂ ಆದಿತ್ಯ, ಅತ್ಯಾಚಾರ ಎಸಗಿದ್ದರು. ಮರುದಿನ ಸ್ನೇಹಿತೆಯರು, ಕ್ಯಾಬ್‌ನಲ್ಲಿ ಮನೆಗೆ ಹೋಗಿದ್ದರು. ಮನೆಯವರಿಗೆ ವಿಷಯ ತಿಳಿಸಿ, ನಂತರ ಠಾಣೆಗೆ ಬಂದು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು