ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ.! ನಾಲ್ಕು ವರ್ಷಗಳ ಅವಧಿಯಲ್ಲಿ 12 ಲೇಖಕಿಯರಿಗೆ ಬಹುಮಾನ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಿಳಾ ಸಾಹಿತ್ಯಕ್ಕೆ ನೀಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವು 2018ರಿಂದ 2021ರವರೆಗೆ ನಾಲ್ಕು ವರ್ಷಗಳ ಅವಧಿಗೆ 12 ಲೇಖಕಿಯರಿಗೆ ಲಭಿಸಿದೆ.
2018ರಿಂದ 2021ರವರೆಗೆ ಒಟ್ಟು 115 ಕೃತಿಗಳು ಆಯ್ಕೆಯಾಗಿ ಬಂದಿದ್ದವು. ನಿರ್ಣಾಯಕರು ಪ್ರತಿ ಸಾಲಿನಲ್ಲಿ ಮೂರು ಕೃತಿಗಳಂತೆ ಆಯ್ಕೆ ಮಾಡಿ ಒಟ್ಟು 12 ಕೃತಿಗಳಿಗೆ ಬಹುಮಾನ ನೀಡಲಾಗಿದೆ
2018ನೇ ಸಾಲಿನಲ್ಲಿ ಬೆಂಗಳೂರಿನ ಉಮಾ ಮುಕುಂದ ಅವರ ‘ಕಡೆ ನಾಲ್ಕು ಸಾಲು’ ಕವನ ಸಂಕಲನ, ಕೊಪ್ಪದ ದೀಪಾ ಹಿರೇಗುತ್ತಿ ಅವರ ‘ಫಿನಿಕ್ಸ್… ಸೋಲಿಸಬಹುದು ಸೋಲನ್ನೆ’ ಅಂಕಣ ಬರಹಗಳ ಸಂಗ್ರಹ, ಚನ್ನಮ್ಮನ ಕಿತ್ತೂರಿನ ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಕವನ ಸಂಕಲನ.
2019ನೇ ಸಾಲಿನಲ್ಲಿ ಬೆಂಗಳೂರಿನ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ ಕೃಷಿ ಮಹಿಳೆಯರ ಅನುಭವ ಕಥನ’, ಭದ್ರತಾವತಿಯ ದೀಪ್ತಿ ಭದ್ರಾವತಿ ಅವರ ‘ಗೀರು ಕಥಾ ಸಂಕಲನ’ ಹಾಗೂ ಧಾರವಾಡದ ಶಾಂತಲಾ ಯೋಗೀಶ ಯಡ್ರಾವಿ ಅವರ ‘ವಿಶ್ವಜಿತ’ ಕಾದರಂಬರಿ.
2020ನೇ ಸಾಲಿನ ಹುಬ್ಬಳ್ಳಿಯ ರೂಪಾ ರವೀಂದ್ರ ಜೋಶಿ ಅವರ ‘ಶ್ರಂಖಲಾ’ ಕಾದರಂಬರಿ, ಮಂಗಳೂರಿನ ಜಯಶ್ರೀ ಬಿ. ಕದ್ರಿ ಅವರ ‘ಬೆಳಕು ಬಳ್ಳಿ ಜೀವನ ಪ್ರೀತಿ’ ಬರಹಗಳು, ಕಾರವಾರದ ಶ್ರೀದೇವಿ ಕೆರೆಮನಿ ಅವರ ‘ಅಂಗೈಯೊಳಗಿನ ಬೆಳಕು’ ಅಂಕಣ ಬರಹಗಳು.
2021ನೇ ಸಾಲಿನಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕಥೆಗಳು, ಬೆಂಗಳೂರಿನ ಪೂರ್ಣಿಮಾ ಮಾಳಗಿಮನಿ ಅವರ ‘ಇಜಯಾ’ ಕಾದರಂಬರಿ, ಮೈಸೂರಿನ ಡಾ. ಸುಜಾತಾ ಅಕ್ಕಿ ಅವರ ’ಆಕಾಶದ ಕೀಲಿ’ ನಾಟಕಕ್ಕೆ ಬಹುಮಾನ ಲಭಿಸಿದೆ.
ಮಾರ್ಚ್ 4 ಹಾಗೂ 5ರಂದು ಸಂಘವು ಆಯೋಜಿಸುತ್ತಿರುವ ಮಹಿಳಾ ಲೇಖಕಿಯರ ಸಮಾವೇಶದಲ್ಲಿ ಬಹುಮಾನ ನೀಡಲಾಗುವುದು. ಪ್ರತಿ ಕೃತಿಗೆ 10ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.