MBBS; ಒಂದು ಕಾಲೇಜಿಗೆ ಪ್ರವೇಶ, ಇನ್ನೊಂದು ಕಾಲೇಜಿಗೆ ಮರು ಹಂಚಿಕೆ; ವಿದ್ಯಾರ್ಥಿಗಳ ವ್ಯಾಸಂಗವೇ ಅಸಿಂಧು ಆಗಬಹುದೇ?

ಬೆಂಗಳೂರು, ಅ.06: ಕಾಲೇಜು ಅನುಮತಿ ವಿಳಂಬ ಕಾರಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು (MBBS) ಬೇರೆ ಕಾಲೇಜಿಗೆ ಮರುಹಂಚಿಕೆ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಅಭಿಪ್ರಾಯಪಟ್ಟಿದೆ. ಮಂಗಳೂರಿನ GMRC ಕಾಲೇಜಿನಲ್ಲಿನ ವಿದ್ಯಾರ್ಥಿಗಳ ಪ್ರವೇಶ ವಿಚಾರವಾಗಿ ಸರ್ಕಾರ ಆತುರದ ನಿರ್ಧಾರ ಕೈಗೊಂಡು ವಿದ್ಯಾರ್ಥಿಗಳನ್ನು ಮರು ಹಂಚಿಕೆ ಮಾಡಿದರೆ ಅದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಿತೆಂದು ತಿಳಿಯಬಹುದೇ ಹೊರತು, ವಿದ್ಯಾರ್ಥಿಗಳು ಶಾಶ್ವತವಾಗಿ ತೊಂದರೆ ಅನುಭವಿಸಬಹುದು ಎಂದು (CRF) ಹೇಳಿದೆ.

ಮಂಗಳೂರಿನ GMRC ಕಾಲೇಜಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮತಿ ನೀಡುವಲ್ಲಿ ವಿಳಂಬವಾಗಿದ್ದು ಈ ಕುರಿತಂತೆ ಹಲವು ಧಾವೆಗಳು ಮಾನ್ಯ ಹೈಕೋರ್ಟಿನಲ್ಲಿ ವಿಚಾರಣಾ ಹಂತದಲ್ಲಿವೆ. ಇದೇ ವೇಳೆ, ಕಾಲೇಜುಗಳಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅವಕಾಶ ನೀಡುವ ಬಗ್ಗೆ ಮಾಹಿತಿ ನೀಡುವಂತೆ ಸೆಪ್ಟೆಂಬರ್ 26ರಂದು ನ್ಯಾಯಪೀಠ ನಿರ್ದೇಶನ ನೀಡಿದ್ದು, ನ್ಯಾಯಪೀಠದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕ್ರಮ ಅನುಸರಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ತರಾತುರಿಯ ಕ್ರಮಗಳಿಂದಾಗಿ ವಿದ್ಯಾರ್ಥಿಗಳಿಗೆ ಮುಂದೆ ಆಗಬಹುದಾದ ಸಂಕಷ್ಟಗಳ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳಿಗೆ ಆಗಬಹುದಾದ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.

ಮೆಡಿಕಲ್ ಕಾಲೇಜುಗಳ ವಿಷಯದಲ್ಲಿ NMCಯು ಕಣ್ಣಾಮುಚ್ಚಾಲೆ ಆಡುತ್ತಿರುವ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಪ್ರಧಾನಿಯವರಿಗೆ ದೂರು ನೀಡಿದ್ದ ಸಿಟಿಜನ್ ರೈಟ್ಸ್ ಫೌಂಡೇಶನ್ ಅಧ್ಯಕ್ಷ ಕೆ.ಎ.ಪಾಲ್, ಇದೀಗ GMRC ವಿದ್ಯಾರ್ಥಿಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, DME ನಿರ್ದೇಶಕರು, KEA ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದು ಮರು ಹಂಚಿಕೆಯಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಂಕಷ್ಟ ಎದುರಾಗಬಹುದು ಎಂಬ ಬಗ್ಗೆ ಮನವರಿಕೆ ಮಾಡಿದ್ದಾರೆ. ಕಾನೂನು ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಸರ್ಕಾರಕ್ಕೆ ವರದಿ ನೀಡಿರುವ ಕೆ.ಎ.ಪಾಲ್, ಸರ್ಕಾರದ ಆತುರದ ಕ್ರಮದಿಂದಾಗಿ ವಿದ್ಯಾರ್ಥಿಗಳ ಪ್ರವೇಶವೇ ರದ್ದಾಗಬಹುದು, ಯಾರಾದರೂ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿದರೆ ವಿದ್ಯಾರ್ಥಿಗಳ ಈವರೆಗಿನ ವ್ಯಾಸಂಗವೂ ವ್ಯರ್ಥವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

mining; ಉಡುಪಿಯಲ್ಲಿ ಕೆಂಪು ಕಲ್ಲು ಹಾಗೂ ಮಣ್ಣಿಗೆ ತೊಂದರೆ ಆಗಬಾರದು; ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ – ಸಿದ್ದರಾಮಯ್ಯ

ಸಿಟಿಜನ್ ರೈಟ್ಸ್ ಫೌಂಡೇಶನ್ ಅಭಿಪ್ರಾಯ

1). ಪ್ರಸಕ್ತ GMRC ಕಾಲೇಜಿನ ವಿಚಾರವು ಹೈಕೋರ್ಟ್ ಮುಂದೆ ವಿಚಾರಣಾ ಹಂತದಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಇತ್ಯರ್ಥ ಬಗೆಹರಿಯುವಂತಾಗಲು ರಾಜ್ಯ ಸರ್ಕಾರ ತನ್ನ ನಿಲುವನ್ನು ತಿಳಿಸಬೇಕಿದೆ.

2). ಕಾಲೇಜಿಗೆ ಅನುಮತಿ ವಿಳಂಬವಾಗಿರುವ ಕಾರಣವನ್ನೇ ಮುಂದಿಟ್ಟು ಕೈಗೊಳ್ಳುವ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಬಾರದು. ಈ ಕಾಲೇಜಿಗೆ ಪರೀಕ್ಷಾ ಪ್ರಾಧಿಕಾರವೇ ಪ್ರವೇಶ ಕಲ್ಪಿಸಿರುವುದು. ಹೀಗಿರುವಾಗ ಪ್ರವೇಶಾನಂತರದ ಕ್ರಮ ಕಾನೂನು ತೊಡಕಿಲ್ಲದಂತೆ ಜಾರಿಯಾಗಬೇಕಿದೆ.

3). ಕಾಲೇಜು 2022-23 ರಲ್ಲಿ 150 ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸಿಕೊಂಡಿದೆ. ಒಂದು ವೇಳೆ ಪ್ರವೇಶ ಪ್ರಕ್ರಿಯೆಯನ್ನು ಅಕ್ರಮ ಎಂದು ವ್ಯಾಖ್ಯಾನಿಸಿದರೆ, ಅಂತಹಾ ವಿದ್ಯಾರ್ಥಿಗಳು ಮುಂದಿನ ಪ್ರಕ್ರಿಯೆಯಾಗಿರುವ ಅಧ್ಯಯನ, ಪರೀಕ್ಷೆ ಇತ್ಯಾದಿ ಹಂತಗಳಲ್ಲಿ ಭಾಗವಹಿಸುವಿಕೆಯ ಅರ್ಹತೆಯನ್ನೇ ಕಳೆದುಕೊಂಡಂತಾಗುತ್ತದೆ.

4). ಸದರಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಪ್ರವೇಶ ಕಲ್ಪಿಸಿದ್ದಾಗಿರುವುದರಿಂದ ಪ್ರವೇಶ ಪ್ರಕ್ರಿಯೆ ಕೂಡಾ ಊರ್ಜಿತವೇ ಆಗಿರುತ್ತದೆ. ಹೀಗಿರುವಾಗ ಪರೀಕ್ಷೆಯನ್ನು ಬೇರೊಂದು ಕಾಲೇಜಿನಲ್ಲಿ ಬರೆಸಲು ಕ್ರಮ ಕೈಗೊಂಡಿದ್ದೇ ಆದಲ್ಲಿ, ಈ ಕ್ರಮವು ನಿಯಮಬದ್ಧ ಎಂದೆನಿಸದು. ಯಾಕೆಂದರೆ, ವಿದ್ಯಾರ್ಥಿಗಳ ಪ್ರವೇಶವೇ ಅಕ್ರಮ ಎಂದಾದಲ್ಲಿ ಪರೀಕ್ಷೆಯ ಅವಕಾಶವೇ ಮರೀಚಿಕೆ ಎಂಬಂತಾಗುತ್ತದೆ.

5). ಕಾಲೇಜಿಗೆ ಅನುಮತಿ ವಿಳಂಬದ ಕಾರಣಕ್ಕಾಗಿ ಪರೀಕ್ಷಾ ಕೇಂದ್ರವನ್ನಷ್ಟೇ ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಶೈಕ್ಷಣಿಕ ಚಟುವಟಿಕೆಯ ಅಂತ್ಯದಲ್ಲಿ ಪರೀಕ್ಷೆ ನಡೆಯುವುದರಿಂದಾಗಿ, ಪರೀಕ್ಷೆಗೆ ಸಿಗುವಷ್ಟೇ ಮಹತ್ವ ಶೈಕ್ಷಣಿಕ ಚಟುವಟಿಕೆಗಳಿಗೂ ಸಿಗುತ್ತದೆ. ಹಾಗಾಗಿ ಕಾಲೇಜಿನ ಆ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಮಾನ್ಯತೆ ಸಿಕ್ಕಿದಂತಾಗುತ್ತದೆ.

6). ಒಂದು ವೇಳೆ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮಾನ್ಯತೆ ನೀಡದೆ, ಕೇವಲ ಪರೀಕ್ಷೆಗಷ್ಟೇ ಮಹತ್ವ ನೀಡಿದರೆ ಇಂತಹಾ ವ್ಯವಸ್ಥೆಯು ‘ದೂರ ಶಿಕ್ಷಣ ವ್ಯವಸ್ಥೆ’ಗೆ ಸಮಾನವಾದಂತಾಗುತ್ತದೆ. ಇಲ್ಲಿ ಗಮನಹರಿಸಬೇಕಾದ ಮಹತ್ವದ ಸಂಗತಿ ಎಂದರೆ, ಮುಕ್ತ ವಿಶ್ವವಿದ್ಯಾಲಯ (Open University) ಕ್ರಮವು ವೈದ್ಯಕೀಯ ಹಾಗೂ ಇಂಜೀನಿಯಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ಅನ್ವಯವುದಿಲ್ಲ. ಮುಕ್ತ ವಿಶ್ವವಿದ್ಯಾಲಯದಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಗಣಿಸದೆ ಪರೀಕ್ಷೆಯನ್ನಷ್ಟೇ ಪರಿಗಣಿಸಲು ವೈದ್ಯಕೀಯ ಶಿಕ್ಷಣದಲ್ಲಿ ಸಾಧ್ಯವಿಲ್ಲ. ಹಾಗಾಗಿ ಸರ್ಕಾರವು ಆತುರದ ತೀರ್ಮಾನ ಕೈಗೊಂಡರೆ ವಿದ್ಯಾರ್ಥಿಗಳ ಪ್ರವೇಶವೇ ಅಮಾನ್ಯವಾಗಬಹುದು.

reservation; ಲೋಕಸಭೆ ಚುನಾವಣೆಯೊಳಗೆ 2ಎ ಮೀಸಲಾತಿ ಸಿಗಬೇಕು: ಶ್ರೀಗಳು ಎಚ್ಚರಿಕೆ

7). ಕಾಲೇಜಿನ MBBS ಎರಡನೇ ವರ್ಷದ ವಿದ್ಯಾರ್ಥಿಗಳಿಗೆ  NMC ಅನುಮತಿ ಇದೆ. ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಮಾಧ್ಯಮಗಳ ತಪ್ಪು ವರದಿ ಮತ್ತು ಇತರೆ ಪ್ರಚೋದನೆಗೊಳಗಾಗಿ ವರ್ಗಾವಣೆ ಪಡೆದಲ್ಲಿ (2 ವರ್ಷಗಳ) ವ್ಯಾಸಾಂಗವೇ ರದ್ದಾಗುತ್ತದೆ.

8). NMCಯು ಎಲ್ಲಾ ರಾಜ್ಯಗಳಿಗೂ ಒಂದೇ ನಿಯಮ ಪಾಲಿಸಬೇಕಾದ ಪ್ರಾಧಿಕಾರವಾಗಿದೆ. “ಒಂದು ದೇಶ ಒಂದು ನಿಯಮ” ಎಂಬ ಸೂತ್ರವನ್ನು ಅನುಸರಿಸಬೇಕಾದ NMC, ಎಲ್ಲಾ ಕಾಲೇಜುಗಳ ಅನುಮತಿ ವಿಚಾರದಲ್ಲೂ ಒಂದೇ ನಿಯಮಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಹೀಗಿರುವಾಗ, ಯಾವುದೇ ಕಾಲೇಜು NMC ನಿಗದಿಪಡಿಸಿದ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಸೀಟುಗಳನ್ನು ಪರಿಗಣಿಸಲು ಅವಕಾಶವಿಲ್ಲ. ತಕ್ಷಣದ ಕ್ರಮಕ್ಕಾಗಿ ನಿಯಮ ಉಲ್ಲಂಘನೆಯಾದರೆ ಈ ಕುರಿತ ಧಾವೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟರೆ ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗಬಹುದು.

9). ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಸೀಟುಗಳು ಭರ್ತಿಯಾಗಿದ್ದು, ಹೆಚ್ಚುವರಿ ಸೀಟುಗಳಿಗಾಗಿ NMCಯ ಅನುಮತಿಯನ್ನು ಅವಲಂಭಿಸಲೇಬೇಕು, ಅನುಮತಿ ನೀಡುವ ಮುನ್ನ NMCಯು ಸದರಿ ಕಾಲೇಜುಗಳನ್ನು ಪರಿಶೀಲಿಸಿ ಸಾಮರ್ಥ್ಯವನ್ನು ದೃಢಪಡಿಸಬೇಕು, ಈ ಪ್ರಕ್ರಿಯೆ ಪೂರ್ಣವಾಗಲು ಹಲವು ತಿಂಗಳುಗಳೇ ಬೇಕಾಗುತ್ತದೆ. ಒಂದು ವೇಳೆ ನಿಯಮಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ ವಿದ್ಯಾರ್ಥಿಗಳ ಮರುಹಂಚಿಕೆ ನಡೆದಲ್ಲಿ ಅಂತಹಾ ಕ್ರಮ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಾರ್ಹವಾಗುತ್ತದೆ. ಆ ಸಂದರ್ಭದಲ್ಲಿ ಸರ್ಕಾರದ ಕ್ರಮ ಅನೂರ್ಜಿತ ಎಂದಾದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಯೋಮಯವಾಗುತ್ತದೆ.

ಹಲವು ಸಂಗತಿಗಳತ್ತ ಗಮನಸೆಳೆದಿರುವ ಸಿಟಿಜನ್ ರೈಟ್ಸ್ ಫೌಂಡೇಶನ್, ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಸರ್ಕಾರ ಸೂಕ್ತ ಕ್ರಮ ಅನುಸರಿಸಬೇಕೆಂದು ಸಲಹೆ ನೀಡಿದೆ. ವಿದ್ಯಾರ್ಥಿಗಳನ್ನು ಪ್ರಚೋದಿಸುವ ಮಾಫಿಯಾಗಳ ಬಗ್ಗೆ ನಿಗಾ ವಹಿಸಬೇಕೆಂದೂ ಮನವಿ ಮಾಡಿರುವ ಕೆ.ಎ.ಪಾಲ್, ಈ ಪ್ರಕರಣದ ಬಗ್ಗೆ ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆ ನಡೆಸಲು ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

Milk Union; ಪ್ರತ್ಯೇಕ ಹಾಲಿನ ಒಕ್ಕೂಟಕ್ಕೆ ಚಿಗೂರೊಡೆಯುತ್ತಿರುವ ಕನಸು; 40 ಸಾವಿರ ಸಬ್ಸಿಡಿಗೆ ಸಚಿವರ ಭರವಸೆ

ಈಗಿರುವ ಕಾಲೇಜುಗಳಿಗೆ ಕಾಯಕಲ್ಪ ಸಿಗಬೇಕಿದೆ:

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಟಿಜನ್ ರೈಟ್ಸ್ ಫೌಂಡೇಶನ್ ಅಧ್ಯಕ್ಷ ಕೆ.ಎ.ಪಾಲ್, ವೈದ್ಯಕೀಯ ಶಿಕ್ಷಣ ಎಂಬುದು ಇತರ ಕೋರ್ಸುಗಳ ರೀತಿಯಲ್ಲಿ ಇಲ್ಲ. ಪ್ರಸ್ತುತ GRMC ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಮರು ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೂ ಒಳಿತಾಗಲ್ಲ. ಕಳೆದ ವರ್ಷದ ವಿದ್ಯಾರ್ಥಿಗಳು ಒಂದು ವರ್ಷವನ್ನೇ ವ್ಯರ್ಥ ಮಾಡಿದಂತಾಗುತ್ತದೆ.

ಇದೇ ವೇಳೆ, ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಕಡಿಮೆ ಇದ್ದು, ಇಂತಹಾ ಸಂದರ್ಭದಲ್ಲಿ ಈಗಿರುವ ಕಾಲೇಜುಗಳಿಗೆ ಕಾಯಕಲ್ಪ ಸಿಗಬೇಕಿದ್ದು ಸೂಕ್ತ ಅನುಮತಿಗಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡುವುದೇ ಸೂಕ್ತ ಕ್ರಮನೆಂದು ಕೆ.ಎ.ಪಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!