ಸಭೆ, ಸಮಾರಂಭ ಆಯೋಜನೆ ಹಿಂದೆ ದೇಶ ಕಟ್ಟುವ ಮಹಾತ್ಕಾರ್ಯವಿದೆ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ದಾವಣಗೆರೆ : ಸಮಾಜದಲ್ಲಿ ಸಭೆ, ಸಮಾರಂಭ ನಡೆಯುತ್ತಿದೆ ಎಂದರೆ ಅದರ ಹಿಂದೆ ದೇಶ ಕಟ್ಟುವ, ಸಮಾಜ ಕಟ್ಟುವ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಒಂದು ಉತ್ತಮ ಯೋಜನೆ ಇರುತ್ತದೆ. ಅಂತಹ ಯೋಜನೆಯಿಂದ ಇಂದು ಬಾಡ ಗ್ರಾಮದಲ್ಲಿ ಮಹಿಳಾ ಸಮಾವೇಶ ಮತ್ತು ನಗೆಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ದಾವಣಗೆರೆ ತಾಲೂಕಿನ ಬಾಡ ಗ್ರಾಮದಲ್ಲಿ ಎಂ.ಬಿ. ವಾಗೀಶ್‌ಸ್ವಾಮಿ ಅಭಿಮಾನಿ ಬಳಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಹಾಗೂ ನಗೆ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಸಭೆ, ಸಮಾರಂಭಗಳು ನಡೆಯುತ್ತಲೇ ಇರಬೇಕು. ಸಭೆ, ಸಮಾರಂಭ ನಡೆಯುವುದರ ಹಿಂದೆ ದೇಶ ಒಗ್ಗೂಡಿಸುವ, ಸಮಾಜ ಕಟ್ಟುವ, ಕಟ್ಟಕಡೆಯ ವ್ಯಕ್ತಿ ಮುನ್ನೆಲೆಗೆ ತರುವ ಪ್ರಯತ್ನ ಇರುತ್ತದೆ ಎಂದರು.
ಸಮಾಜ ಒಗ್ಗೂಡಿಸುವ ಕೆಲಸಕ್ಕೆ ಬಿ.ಎಂ. ವಾಗೀಶಸ್ವಾಮಿ ಅಭಿಮಾನಿ ಬಳಗ ಕೈಹಾಕಿದ್ದು ಉತ್ತಮ ಕಾರ್ಯ. ಮನುಷ್ಯನಿಗೆ ಮಾಡಿಯೂ ಮಾಡದಂತಿರುವ ಗುಣವಿರಬೇಕು. ಸಮಾಜದೊಳಗೆ ಉತ್ತಮ ಕಾರ್ಯ ಮಾಡುವ ಮನಸ್ಸು ಮನುಷ್ಯನಿಗಿರಬೇಕು, ಮಾಡಿದ ಕೆಲಸವನ್ನು ಹೇಳಿಕೊಳ್ಳದೆ ಮೂಖನಂತಿರಬೇಕು. ಅಂತಹ ಅತ್ಯುತ್ತಮ ವ್ಯಕ್ತಿತ್ವ ಬಿ.ಎಂ. ವಾಗೀಶ್‌ಸ್ವಾಮಿ ಅವರಲ್ಲಿದೆ ಎಂದರು. ನೈಜ್ಯತೆಗೆ ಸಮಾಜದಲ್ಲಿ ಬೆಲೆ ಇದ್ದೆ ಇದೆ. ನೈಜತೆಯ ಬೆಲೆ, ಅದರ ತೂಕ ಹೇಗಿದ್ದೀರ ಕಡಿಮೆಯಾಗಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ವ್ಯಕ್ತಿಯೊಬ್ಬರಿಂದ 2 ಸಾವಿರ ರೂಗಳನ್ನು ಪಡೆದು ಅದನ್ನು ಮಡಚಿ, ಕಾಲಿನ ಕೆಳಗೆ ಇಟ್ಟು, ಈ ಹಣ ಈಗ ಗಲೀಜಾಗಿದೆ, ಮಡಿಚಿ ಪೇಪರ್‌ನಂತಾಗಿದೆ. ಹೀಗಿದ್ದಾಗಲೂ ಇದರ ಬೆಲೆ ಎಷ್ಟು? ಇದಕ್ಕೆ ಬೆಲೆ ಇಲ್ಲವೇ? ಎಂದು ನೆರೆದಿದ್ದವರನ್ನು ಮನೋಜ್ಞವಾಗಿ ಅರ್ಥೈಸುವ ಪ್ರಯತ್ನ ಮಾಡಿದರು. ಹಾಗೆಯೇ ನೆರೆದಿದ್ದ ಜನರನ್ನು ಉದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದ ಜಿಲ್ಲಾಧಿಕಾರಿಗಳು ಜೀವನದಲ್ಲಿ ಮನುಷ್ಯ ನಗಬೇಕು. ಹಗಲು ರಾತ್ರಿ ದುಡಿಮೆ ಮಾಡಿ ಜೀವನದಲ್ಲಿ ಬೇಸರ ವಾಗಿರುತ್ತದೆ. ಆಗಿರುವ ಬೇಸರ ಕಳೆಯಲು ಮನುಷ್ಯ ನಗಬೇಕು. ನಕ್ಕಷ್ಟು ಮನುಷ್ಯ ಆರೋಗ್ಯದಿಂದ, ನೆಮ್ಮದಿಯಿಂದ ಇರುತ್ತಾನೆ ಎಂದು ಹಾಸ್ಯ ಸನ್ನಿವೇಶಗಳನ್ನು ಹೇಳಿ ನಕ್ಕು ನಗಿಸಿದರು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ರಿಷ್ಯಂತ್ ಮಾತನಾಡಿ ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಕೊರೋನಾ ಸಂದರ್ಭದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಎಷ್ಟೋ ಕಡೆಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆಯೂ ಆಗಿದೆ. ಹಲ್ಲೆ ಆದರೂ ಸಹ ಮತ್ತೇ ಜನರ ಆರೋಗ್ಯ ದೃಷ್ಟಿಯಿಂದ ಅವರ ಬಗ್ಗೆ ಕಾಳಜಿ ವಹಿಸುವುದಿದೆಯಲ್ಲ ಅಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅಂತಹ ಸಾಧಕ ಮಹಿಳೆಯರನ್ನು ಬಿ.ಎಂ. ವಾಗೀಶ್‌ಸ್ವಾಮಿ ಅಭಿಮಾನಿ ಬಳಗದಿಂದ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ. ಹೆಚ್. ಪ್ರಕಾಶ್, ರವಿ, ಶಾಂತಕುಮಾರ್, ಕುಬೇರಪ್ಪ, ಗಿರಿಸಿದ್ದಪ್ಪ, ಸಣ್ಣಗೌಡ್ರು, ಮಂಜಪ್ಪ, ಶ್ರೀನಿವಾಸ್, ನಾಗರಾಜಪ್ಪ, ಪೂಜಾರ್ ಮಹೇಶಪ್ಪ, ಸೋಮಶೇಖರಪ್ಪ, ಕಾಕನೂರ್ ನಾಗರಾಜಪ್ಪ, ಮಹರುದ್ರಪ್ಪ, ಶೈಲಜಾ ಬಸವರಾಜಪ್ಪ, ಟಿ. ಮಂಜುಳಾ ರಾಜು ಇದ್ದರು.