ಮೆಕ್ಕೆಜೋಳ ಖರೀದಿಸಿ 10.63 ಕೋಟಿ ವಂಚಿಸಿದ್ದ ವ್ಯಕ್ತಿಯನ್ನ ಬಂಧಿಸಿದ ಹರಿಹರ ನಗರ ಪೊಲೀಸ್

ದಾವಣಗೆರೆ: ಅಂತರ್ ರಾಜ್ಯ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿಸಿ ವರ್ತಕರಿಗೆ ಚೆಕ್ ನೀಡಿ ₹10.63 ಕೋಟಿ ರೂ., ಪಂಗನಾಮ ಹಾಕಿದ್ದ ವಂಚಕನನ್ನು ಹರಿಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಪಿಯೋನರ್ ಫೀಡ್ಸ್ ಅಂಡ್ ಫೌಲ್ಟ್ರಿ ಪಾಲುದಾರನಾಗಿದ್ದ ನಂದಕುಮಾರ ಬಂಧಿತ ಆರೋಪಿಯಾಗಿದ್ದು, ಈತನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಆರೋಪಿ ನಂದಕುಮಾರ್ ದಾವಣಗೆರೆ, ಹೊನ್ನಾಳಿ, ರಾಣೆಬೆನ್ನೂರು, ಹಾವೇರಿ, ಬೆಂಗಳೂರು, ಶಿವಮೊಗ್ಗ, ಕೊಟ್ಟೂರು ವರ್ತಕರಲ್ಲಿ ಸುಮಾರು ₹10.63 ಕೋಟಿ ಹೆಚ್ಚು ಮೊತ್ತದ ಮೆಕ್ಕೆಜೋಳ ಖರೀದಿ ಮಾಡಿ ನಂತರ ಮೆಕ್ಕೆಜೋಳದ ಹಣ ಪಾವತಿಗೆ ಚೆಕ್‌ಗಳನ್ನು ನೀಡುತ್ತಿದ್ದ. ಆದರೆ, ಆ ಚೆಕ್‌ಗಳು ಬೌನ್ಸ್ ಆಗಿರುವ ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಹೊರ ರಾಜ್ಯಗಳಲ್ಲೂ ಇದೇ ರೀತಿ ವಂಚನೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಕಳೆದ 2008 ರಲ್ಲಿ ದೊಸ್ತಾನಾ ಟ್ರೇಡರ್‌ನ ಮಾಲೀಕರಾದ ಖಲೀಲ್ ದೊಸ್ತಾನಾ ಅವರ ಬಳಿ ಸುಮಾರು ₹1 ಕೋಟಿ ಮೌಲ್ಯದ ಮೆಕ್ಕೆಜೋಳವನ್ನು ಖರೀದಿಸಿದ್ದ ನಂದಕುಮಾರ್, ಹಣಕ್ಕೆ ಬದಲಾಗಿ ನೀಡಲು ಚೆಕ್ ನೀಡಿದ್ದ. ಆದರೆ, ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಖಲೀಲ್ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.
ಹರಿಹರದ ಜೆಎಂಎಫ್ ಸಿ ನ್ಯಾಯಲಯವು ಆರೋಪಿ ನಂದಕುಮಾರ ಕೋರ್ಟ್ ಗೆ ಹಾಜರಾಗುವಂತೆ 33 ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರೆ, ಆರೋಪಿ ಕೋರ್ಟ್ ಕಡೆ ಸುಳಿಯದ ಹಿನ್ನೆಲೆಯಲ್ಲಿ ಕಳೆದ ಜು.17 ರಂದು ಬಂಧನ ವಾರೆಂಟ್ ಜಾರಿ ಮಾಡಿ ನ್ಯಾಯಾಲಯವು ಆದೇಶ ಹೊರಡಿಸಿತ್ತು.
ಕೂಡಲೇ ಆರೋಪಿ ಪತ್ತೆಗೆ ಜಾಲಬೀಸಿದ ಹರಿಹರ ನಗರ ಠಾಣೆಯ ಪಿಎಸ್‌ಐ ಸುನೀಲ್ ತೇಲಿ ಮತ್ತು ಸಿಬ್ಬಂದಿಗಳಾದ ಎಎಸ್‌ಐ ಮೈಕಲ್ ಆಂತೋನಿ, ಸತೀಶ್, ಶಿವರಾಜ್ ಅವರನ್ನೊಳಗೊಂಡ ತಂಡವು ಆರೋಪಿತನಾದ ನಂದಕುಮಾರನನ್ನು ತಮಿಳುನಾಡಿನ ತಿರುಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯ ಬಗ್ಗೆ ಮತ್ತಷ್ಟು ತನಿಖೆ ಮುಂದುವರೆಸಿದ್ದಾರೆ.