ವೇಸ್ಟ್ ಡಿಕಂಪೋಸರ್ ತಯಾರಿಸುವ ವಿಧಾನ ಮತ್ತು ಉಪಯೋಗಗಳು

ದಾವಣಗೆರೆ :ವೇಸ್ಟ್ ಡಿಕಂಪೋಸರ್ ಎನ್ನುವುದು ಹಲವು ಪ್ರಕಾರದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ. ಇದನ್ನು ನಾಟಿ ಹಸುವಿನ ಸಗಣಿಯ ಹೊಳೆಯಲ್ಲಿರುವ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಒಂದು ಕಲ್ಚರ್. ಇದರ ಬಳಕೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ವೇಸ್ಟ್ ಡಿಕಂಪೋಸರ್ ದ್ರಾವಣ ತಯಾರಿಸಲು ಬೇಕಾಗುವ ವಸ್ತುಗಳು:
1. ವೇಸ್ಟ್ ಡಿಕಂಪೋಸರ್ – 1 ಬಾಟಲ್
2. 2 ಕೆಜಿ ಸಾವಯವ ಬೆಲ್ಲ
3. 200 ಲೀಟರ್ ಅಳತೆಯ ಪ್ಲಾಸ್ಟಿಕ್ ಡ್ರಮ್
4. ಬಿದಿರಿನ /ಕಟ್ಟಿಗೆಯ ಕೋಲು
5. ಮುಚ್ಚಲಿಕ್ಕೆ ಬಟ್ಟೆ ಅಥವಾ ಗೋಣಿಚೀಲ
ವೇಸ್ಟ್ ಡಿಕಂಪೋಸರ್ ದ್ರಾವಣ ತಯಾರಿಸುವ ವಿಧಾನ:
ಮೊದಲಿಗೆ ಡ್ರಮ್ ಗೆ ಅರ್ಧದಷ್ಟು ನೀರು ತುಂಬಿಸಿ 2 ಕೆಜಿ ಬೆಲ್ಲವನ್ನು ಪುಡಿ ಮಾಡಿ ಡ್ರಮ್-ಗೆ ಹಾಕಬೇಕು. ನಂತರ ಕೋಲಿನಿಂದ ತಿರುಗಿಸಿ ವೇಸ್ಟ್ ಡಿಕಂಪೋಸರ್ ಬಾಟಲ್ ನಲ್ಲಿ ಇರುವ ಸಂಪೂರ್ಣ ದ್ರಾವಣವನ್ನು ಡ್ರಮ್-ಗೆ ಹಾಕಿ. ಆಮೇಲೆ ನೀರು ಸಂಪೂರ್ಣವಾಗಿ ತುಂಬಿಸಿಕೊಂಡು ಕೋಲಿನಿಂದ ತಿರುಗಿಸಿ ಬಟ್ಟೆಯಿಂದ/ ಗೋಣಿ ಚೀಲದಿಂದ ದ್ರಾವಣವನ್ನು ಮುಚ್ಚಿ ದಾರದಿಂದ ಕಟ್ಟಿ ಬಿಡಬೇಕು. ಹೀಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೋಲಿನಿಂದ ತಿರುಗಿಸಬೇಕು. ಐದು ದಿನದ ಒಳಗೆ ವೇಸ್ಟ್ ಡಿಕಂಪೋಸರ್ ದ್ರಾವಣ ಬಳಕೆಗೆ ಸಿದ್ಧವಾಗುತ್ತದೆ.
ವೇಸ್ಟ್ ಡಿಕಂಪೋಸರ್ ಸಿಂಪರಣೆ ಮಾಡುವ ವಿಧಾನ:
1. ವಾರಕ್ಕೆ ಒಂದು ಸಾರಿ ಸಿಂಪರಣೆ ಮಾಡುವುದಾದರೆ 50ರಷ್ಟು ದ್ರಾವಣ ಮತ್ತು 50 ರಷ್ಟು ನೀರನ್ನು ಒಂದು ಕ್ಯಾನ್ ಗೆ ಬಳಸಬಹುದು.
2. ಪ್ರತಿ ಮೂರು ದಿನಕ್ಕೆ ಒಂದು ಸಿಂಪರಣೆ ಮಾಡುವುದಾದರೆ 40ರಷ್ಟು ದ್ರಾವಣ ಮತ್ತು 60 ರಷ್ಟು ನೀರನ್ನು ಬಳಸಬಹುದು.
3. ಹಣ್ಣಿನ ಗಿಡಗಳಿಗೆ ಸಿಂಪರಣೆ ಮಾಡುವುದಾದರೆ 60ರಷ್ಟು ದ್ರಾವಣ ಮತ್ತು 40ರಷ್ಟು ನೀರನ್ನು ಬಳಸಬೇಕು.
4. ಬೆಳೆ ಕಟಾವಾದ ಮೇಲೆ ಉಳಿದಿರುವ ಕಾಂಡಗಳ ಮತ್ತು ಬೆಳವಣಿಗೆಗಳ ಮೇಲೆ 500 ರಿಂದ 1000 ಲೀಟರ್ ದ್ರಾವಣ ಸಿಂಪರಣೆ ಮಾಡಿ ಅಥವಾ ಅದರ ಮೇಲೆ ಚೆಲ್ಲಿ. ಇದರಿಂದ ಬೆಳೆ ಉಳಿಕೆಗಳು ಕಳಿಸಿ ಬೇಗ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.
ವೇಸ್ಟ್ ಡಿಕಂಪೋಸರ್ ನ ಲಾಭಗಳು:
- ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತದೆ.
- ಮಣ್ಣಿನ ಫಲವತ್ತತೆಯನ್ನು ಉತ್ತಮಪಡಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.
- ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಗಿಡಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಬೀಜೋಪಚಾರಕ್ಕೆ ಬಳಸುವುದರಿಂದ ಬೀಜಗಳ ಮೊಳಕೆ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಿಂದ ಬರುವ ಎಲ್ಲಾ ರೋಗಗಳನ್ನು ನಿಯಂತ್ರಿಸುತ್ತದೆ.
- ಇದರ ನಿರಂತರ ಬಳಕೆಯಿಂದ ಎರೆಹುಳುಗಳ ಅಭಿವೃದ್ಧಿಯಾಗುತ್ತದೆ ಅಲ್ಲದೆ ಉಪಯೋಗಕಾರಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
- ಭೂಮಿಯು ನಿಧಾನವಾಗಿ ಹದವಾಗುತ್ತ ಬರುತ್ತದೆ.
- ತೋಟದ ತ್ಯಾಜ್ಯಗಳು ಬೆಳೆ ಉಳಿಕೆಗಳು ಮತ್ತು ರಾಸುಗಳ ತ್ಯಾಜ್ಯವನ್ನು ವೇಗವಾಗಿ ಗೊಬ್ಬರವಾಗಿ ಪರಿವರ್ತಿಸುತ್ತದೆ.
ಈ ದ್ರಾವಣವನ್ನು ಎಲ್ಲಾ ತರಹದ ಬೆಳೆಗಳಿಗೆ ಉಪಯೋಗಿಸಿ ಪ್ರಯೋಜನ ಪಡೆಯುವುದು