ದಾವಣಗೆರೆ : ಬೆಣ್ಣೆ ನಗರಿಗೆ ಮೋದಿ ಸಂಪುಟ ಆಗಮಿಸಿದ್ದು, ಪ್ರಧಾನಿ ಆಟ ನಡೆಯಲಿಲ್ಲ ಎಂಬುದಕ್ಕೆ ಕಾಂಗ್ರೆಸ್ ಗೆಲುವು ಕಾರಣವಾಗಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರೆ, 2023 ರ ಚುನಾವಣೆಯಲ್ಲಿ ಇದು ಉಲ್ಟಾ ಆಗಿದೆ. ದಾವಣಗೆರೆ ಏಳು ಕ್ಷೇತ್ರಗಳಲ್ಲಿ 6 ರಲ್ಲಿ ಕಾಂಗ್ರೆಸ್ ತನ್ನ ಚುಕ್ಕಾಣಿ ಹಿಡಿದರೆ, 1ರಲ್ಲಿ ಮಾತ್ರ ಬಿಜೆಪಿ ತನ್ನ ಖಾತೆ ತೆರೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 2 ಗೆದ್ದಿದ್ದು, ಬಿಜೆಪಿ ಐದು ಸ್ಥಾನ ಗೆದ್ದಿತ್ತು.
ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಶತಾಯಗತಾಯ ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಪ್ರಧಾನಿ ಮೋದಿ, ಸ್ಮೃತಿ ಇರಾನಿ, ಕಿಚ್ಚ ಸುದೀಪ್, ಯಡಿಯೂರಪ್ಪ, ಜೆ.ಪಿ.ನಡ್ಡಾ, ಧಾರಾವಾಹಿ ನಟಿಯರು ಹೀಗೆ ಹತ್ತಾರು ನಾಯಕರು ಆಗಮಿಸಿದ್ದರು. ಆದರೆ ದಾವಣಗೆರೆ ಜಿಲ್ಲೆಯ ಮತದಾರ ಇದ್ಯಾವುದನ್ನು ಲೆಕ್ಕಕ್ಕೆ ಹಿಡಿಯಲಿಲ್ಲ.
ಪ್ರಧಾನಿ ಮೋದಿ ಬಂದ್ರೆ, ಮತಗಳು ಉಲ್ಟಾ ಆಗುತ್ತವೆ ಎಂದು ಬಿಜೆಪಿಯ ಅನೇಕರು ಅಂದುಕೊಂಡಿದ್ದರು. ಆದರೆ ಮತದಾರ ಸ್ಥಳೀಯ ನಾಯಕನಿಗೆ ಮಾತ್ರ ಮತ ಕೊಟ್ಟಿದ್ದಾನೆ.
ದಾವಣಗೆರೆ ಪ್ರಧಾನಿ ಮೋದಿ ನಾಲ್ಕು ಬಾರಿ ಬಂದಿದ್ದು, 2018ರಲ್ಲಿ ಮೋದಿ ಬಂದಾಗ ದಾವಣಗೆರೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳಿಸಿತ್ತು. ಆದರೆ ಈ ಪ್ರಯೋಗ 2023ರಲ್ಲಿ ನಡೆಯಲಿಲ್ಲ. ಬೆಣ್ಣೆ ನಗರಿಯಲ್ಲಿ ಲಿಂಗಾಯಿತ ಮತಗಳೇ ಹೆಚ್ಚಿದ್ದು, ಕಾಂಗ್ರೆಸ್ ಇದನ್ನು ಎನ್ ಕ್ಯಾಚ್ ಮಾಡಿಕೊಂಡಿತ್ತು. ಅಲ್ಲದೇ ರಾಜ್ಯಮಟ್ಟದಲ್ಲಿ ಬಿಜೆಪಿ ನೀಡಿದ ಹೇಳಿಕೆಯಿಂದ ಲಿಂಗಾಯಿತ ಮತಗಳು ಕಾಂಗ್ರೆಸ್ಸಿನ ಮತಗಳಾಗಿ ಪರಿವರ್ತನೆ ಆಗಿದೆ. ಇನ್ನು ಲಂಬಾಣಿ ಮತಗಳು ಸಹ ಕಾಂಗ್ರೆಸ್‌ಗೆ ಕೈ ಹಿಡಿದ ಕಾರಣ ಕೈಗೆ ಶಕ್ತಿ ತುಂಬಿತು.
ಸಿದ್ದರಾಮೋತ್ಸವ ಕೈ ಹಿಡಿಯಿತು : ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಜೋಡೋಯಾತ್ರೆ ಕಾರಣ ಕೈ ಗೆದ್ದರೆ, ದಾವಣಗೆರೆಯಲ್ಲಿ ಚುನಾವಣಾ ಪೂರ್ವ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಕೈ ಹಿಡಿಯಿತು. ಬಳಿಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಬಂದ ಕಾರಣ ಇಲ್ಲಿನ ಕೈ ಅಭ್ಯರ್ಥಿಗಳಿಗೆ ಹೆಚ್ಚು ಬಲ ತಂದು ಕೊಟ್ಟಿತ್ತು. ಇನ್ನು ಸಿದ್ದರಾಮೋತ್ಸವಕ್ಕೆ ಬಂದ ಜನರ ದಂಡು ನೋಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಇದನ್ನು ನೋಡಿದ ಬಿಜೆಪಿ ಆಗಲೇ ಸೋಲು ಒಪ್ಪಿಕೊಂಡಿದ್ದರೂ, ಮೇಲ್ನೋಟಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿತ್ತು. ಇದೆಲ್ಲದರ ನಡುವೆಯೂ ಸುಮ್ಮನಾಗದ ಬಿಜೆಪಿ ಪ್ರಧಾನಿ ಕರೆಸಿ ಮತ ಕೊಯ್ಲು ನಡೆಸಲು ಮುಂದಾಗಿತ್ತು. ಆದರೆ ಸಿದ್ದರಾಮೋತ್ಸವಕ್ಕೆ ಬಂದಷ್ಟು ಜನ ಮೋದಿ ಬಂದಾಗ ಕಾಣಲಿಲ್ಲ. ಈ ಎಲ್ಲ ಕಾರಣಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣವಾಯಿತು.
ಸ್ಮಾರ್ಟ್‌ಸಿಟಿಯಲ್ಲಿ ನಡೆದ ಕಳಪೆ ಕಾಮಗಾರಿ, ಪಾಲಿಕೆಯಲ್ಲಿ ನಡೆದ ಆಪರೇಷನ್ ಕಮಲ ಇವುಗಳು ಕಾಂಗ್ರೆಸ್ ನಾಯಕರನ್ನು ದಿಕ್ಕು ತೋಚದಂತೆ ಮಾಡಿತ್ತು. ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಇದ್ದರೂ, ಬಿಜೆಪಿ ಕೈ ನಾಯಕರನ್ನು ಅಧಿಕಾರ, ಹಣದ ಆಸೆಯಿಂದ ಸೆಳೆದುಕೊಂಡು ಆಡಳಿತ ನಡೆಸಿತ್ತು, ಅಲ್ಲದೇ ಬೆಂಗಳೂರಿನಲ್ಲಿ ವಾಸವಾಗಿರುವವರನ್ನು ಇಲ್ಲಿಗೆ ಕರೆಸಿ ಮತದಾರ ಪಟ್ಟಿಯಲ್ಲಿ ಸೇರಿಸಿ ಮತ ಹಾಕುವಂತೆ ಮಾಡಿತ್ತು. ಇವೆಲ್ಲ ಆಟಗಳನ್ನು ಜಿಲ್ಲೆಯ ಮತದಾರ ನೋಡುತ್ತಿದ್ದು, ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾನೆ.
ಒಟ್ಟಾರೆ ಬಿಜೆಪಿ ಮಾಡಿದ ಎಲ್ಲ ತಂತ್ರಗಳು ಠುಸ್ ಆಗಿದ್ದು, ಕಾಂಗ್ರೆಸ್ ನಗೆ ಬೀರಿದೆ.
